Monday, 30 June 2014

Resume ರೆಡಿನಾ ...?

28/06/2014 ಶನಿವಾರದ ಕನ್ನಡಪ್ರಭ ಪತ್ರಿಕೆಯಲ್ಲಿ ನನ್ನ ಲೇಖನ 
ಎಂಜಿನಿಯರಿಂಗ್ ಪದವಿ ಈಗಷ್ಟೇ ಮುಗಿದಿದೆ. ಲಕ್ಷಾಂತರ ಮಂದಿಯ ನಡುವೆ ಉದ್ಯೋಗ ಬೇಟೆ ಶುರು. ಆದರೆ ನಾವು ಬಯಸಿದ ನೌಕರಿ ಸಿಗದಿದ್ದಾಗ ನಮ್ಮ ಉತ್ಸಾಹಗಳೆಲ್ಲ ಪಾತಾಳಕ್ಕೆ ಇಳಿದಿರುತ್ತದೆ.
ಹೌದು, ಇದಕ್ಕೆಲ್ಲ ಕಾರಣ ಪೂರ್ವ ತಯಾರಿಯ ಕೊರತೆ. ಹೇಳಿ ಕೇಳಿ ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಒಂದು ನೌಕರಿಗೆ ನೂರಾರು ಆಕಾಂಕ್ಷಿಗಳಿರುತ್ತಾರೆ. ಹಾಗಾಗಿ ಬಯಸಿದ ಕೆಲಸ ಸಿಗಬೇಕಾದರೆ ಜಾಣ್ಮೆ, ಒಂದಷ್ಟು ಪೂರ್ವ ತಯಾರಿ ಅತ್ಯಗತ್ಯ. ಅದು ಹೇಗೆ? ಇಲ್ಲಿದೆ ಉತ್ತರ...
1.ಪದವಿಗಾಗಿ ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ವಿಷಯದಲ್ಲಿ ಪರಿಣತಿ ಹೊಂದಿರುವವರ ಬಳಿ ಉದ್ಯೋಗಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿ ಕಲೆಹಾಕಿ.
2.ರೆಸ್ಯೂಮ್ ತಯಾರಿಸಲು ಮತ್ತು ಸಂದರ್ಶನದ ಪೂರ್ವ ತಯಾರಿ ಬಗ್ಗೆ ಪರಿಣತರ ಮಾರ್ಗದರ್ಶನ ತೆಗೆದುಕೊಳ್ಳಿ.
3.ರೆಸ್ಯೂಮನ್ನು ವೃತ್ತಿಗೆ ಸಂಬಂಧಿಸಿದ ಜಾಲತಾಣಗಳಾದ ನೌಕರಿ.ಕಾಂ, ಮಾನ್ಸ್ಟರ್.ಕಾಂ ಮುಂತಾದವುಗಳಲ್ಲಿ ನೋಂದಣಿ ಮಾಡಿಕೊಳ್ಳಿ.
4.ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಕನ್ಸಲ್ಟೆನ್ಸಿಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೇಮಕ ಪ್ರಕ್ರಿಯೆ ನಡೆಸುತ್ತವೆ. ಹಾಗಾಗಿ ಪ್ರಸಿದ್ಧ ಕನ್ಸಲ್ಟೆನ್ಸಿಗಳಿಗೆ ರೆಸ್ಯೂಮ್ ಕೊಟ್ಟು ರಿಜಿಸ್ಟರ್ ಮಾಡಿಸಿಕೊಳ್ಳಿ.
5.ಕೆಲಸದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗುವುದರಿಂದ ಅದರ ಮೇಲೊಂದೂ ಕಣ್ಣಿಟ್ಟಿರಿ.
6.ನೀವು ಎಂಜಿನಿಯರಿಂಗ್ ಓದಿದ್ದರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗೆಳೆಯರ ಜತೆ ನಿರಂತರ ಸಂಪರ್ಕದಲ್ಲಿರಿ.

7.ಬಹುತೇಕ ಕೆಲಸಗಳು ರೆಫರೆನ್ಸ್ನಿಂದ ಮತ್ತು ಜನ ಸಂಪರ್ಕದಿಂದಲೇ ಸಿಗುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಕಂಪನಿ ಮತ್ತು ನಾವು ಆರಿಸಿಕೊಂಡ ವಿಷಯಗಳಲ್ಲಿ ನುರಿತವರನ್ನು ಪರಿಚಯ ಮಾಡಿಕೊಳ್ಳಿ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಜತೆಗೂ ಸಂಪರ್ಕ ಇಟ್ಟುಕೊಳ್ಳಿ. ಹಿರಿಯ ವಿದ್ಯಾರ್ಥಿಗಳು ತಮ್ಮ ರೆಫರೆನ್ಸ್ನಿಂದ ಕೆಲಸ ಗಿಟ್ಟಿಸಿಕೊಟ್ಟ ಉದಾಹರಣೆ ಸಾಕಷ್ಟುಂಟು.
 8.ಇತ್ತೀಚಿನ ದಿನಗಳಲ್ಲಿ ಲಿಂಕ್ಡ್ಇನ್ ಉದ್ಯೋಕಾಂಕ್ಷಿಗಳು ಮತ್ತು ಕಂಪನಿಯನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಲಿಂಕ್ಡ್ಇನ್ನಲ್ಲೂ ಖಾತೆ ತೆರೆಯಿರಿ.
9.ಸಾಮಾನ್ಯವಾಗಿ ಕಂಪನಿಯಲ್ಲಿ ರೆಸ್ಯೂಮ್ ಹಾಕಿದ ದಿನಾಂಕದ ಮೇಲೆ ಮತ್ತು ಡೊಮೇನ್ನಲ್ಲಿ ಬರುವ ಮುಖ್ಯವಾದ ಪದಗಳ ಆಧಾರದಲ್ಲಿ ಉದ್ಯೋಗಾಕಾಂಕ್ಷಿಗಳ ರೆಸ್ಯೂಮ್ ಹುಡುಕಲಾಗುತ್ತದೆ. ಆದ್ದರಿಂದ ನಿತ್ಯ ರೆಸ್ಯೂಮ್ ಅನ್ನು ಅಪ್ಲೋಡ್ ಮಾಡುವುದು ಮತ್ತು ಡೊಮೇನ್ನಲ್ಲಿ ನುರಿತವರ ಮಾರ್ಗದರ್ಶನದಲ್ಲಿ ರೆಸ್ಯೂಮ್ ತಯಾರಿಸುವುದು ಒಳಿತು.
10.ರೆಸ್ಯೂಮ್ ಸಾಧ್ಯವಾದಷ್ಟು ಚಿಕ್ಕದಾಗಿ ಚೊಕ್ಕವಾಗಿರಲಿ. ಶಾಲಾ ಕಾಲೇಜು ದಿನಗಳಲ್ಲಿ ಮಾಡಿದ ಸಾಧನೆಗಳ ವಿವರವೂ ಅಲ್ಲಿರಲಿ.
11.ನಿಮ್ಮಂತೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ವೃತ್ತಿಪರ ಜಾಲತಾಣಗಳಿಗೆ ಅಪ್ಲೋಡ್ ಮಾಡಿರುತ್ತಾರೆ. ಹಾಗಾಗಿ ನಿತ್ಯ ಮೇಲ್ ನೋಡಿ. ಕಂಪನಿಯಿಂದೇನಾದರೂ ಮೇಲ್ ಬಂದಿದ್ದರೆ ತಕ್ಷಣ ಪ್ರತ್ಯುತ್ತರ ನೀಡಿ. ಒಂದು ದಿನ ತಡವಾದರೂ ನೀವು ಸ್ಪರ್ಧೆಯಿಂದ ಹಿಂದೆ ಬೀಳುತ್ತೀರಿ ಎನ್ನುವುದು ನೆನಪಿರಲಿ.
12.ಸಂದರ್ಶನಕ್ಕೆ ತೆರಳುವ ಮುನ್ನ ಕಂಪನಿ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡಿರಿ. ಸಂದರ್ಶನಕ್ಕೆ ಫಾರ್ಮಲ್ ಬಟ್ಟೆಗಳನ್ನೇ ಧರಿಸಿ.

Sunday, 19 January 2014

ಕನ್ನಡದಿಂದ ಅನ್ನ [ಕನ್ನಡಿಗರಿಗೆ ಉದ್ಯೋಗ]

ಗೆಳೆಯರೇ ಕನ್ನಡಿಗರಿಗೆ ಉದ್ಯೋಗ ಅನ್ನುವ ಗುಂಪಿದೆ ಹರ್ಷ ಸರ್, ಆನಂದ್ ಸರ್, ರವೀಂದ್ರ ಸರ್ ಮುಂತಾದವರು ಈ ಗುಂಪನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವುದು ಕಷ್ಟಕರವಾಗಿದೆ. ಮತ್ತು ನಮ್ಮ ಕನ್ನಡದ ಬಳಕೆಯನ್ನು ನಿರ್ಲಕ್ಷಿಸಲಾಗಿದೆ ಇದನ್ನೆಲ್ಲಾ ತಡೆಗಟ್ಟುವ ನಿಟ್ಟಿನಲ್ಲಿ ಈ ಗುಂಪು ಕಾರ್ಯ ನಿರ್ವಹಿಸುತ್ತಿದೆ .
ಮೊನ್ನೆ ದಿನ ಶನಿವಾರ ಈ  ಗುಂಪಿನ ಮೀಟಿಂಗ್ ಗೆ ಹೋಗಿದ್ದೆ ಅಲ್ಲಿ ಇದ್ದವರು ಎಲ್ಲಾ ಗೊತ್ತಿರೋ ಮುಖಗಳೇ ಆಗಿದ್ದವು. ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಾವೆಲ್ಲರು ಸೇರಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡೆವು

೧.  ಮಾಹಿತಿ ಸಂಗ್ರಹಣ ಮತ್ತು ಸಂಶೋಧನಾ ತಂಡ
೨. ಅಂತರ್ಜಾಲ ತಾಣ ತಂಡ
೩. ಉದ್ಯಮಶೀಲತೆ ತಂಡ
೪. ಕೌಶಲ್ಯ ಅಭಿವೃಧಿ ತಂಡ

ಎಲ್ಲಾ ತಂಡಗಳು ಕಲೆಹಾಕಿದ ಮಾಹಿತಿ, ಕನ್ನಡಿಗರು ಕೆಲಸ ಪಡೆದುಕೊಳ್ಳುವಲ್ಲಿ ಎದರಿಸುವ ಸಮಸ್ಯೆಗಳು ಮತ್ತು  ಕುಂದು ಕೊರತೆಗಳನ್ನು ಸರಿ ಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದೆವು. ಎಲ್ಲಿ ನಮ್ಮ ಕನ್ನಡದ ಬಳಕೆ ಕಾಣುವುದಿಲ್ಲವೋ ಅಲ್ಲಿ ನಮ್ಮ ಕನ್ನಡದ ಬಳಕೆಯನ್ನು ತರಲು ಏನು ಮಾಡಬೇಕು ಎಂಬುದಾಗಿ  ಚರ್ಚಿಸಿದೆವು.
ನಾವು ಈಗ ಎಚ್ಚೆತ್ತು ಕೊಳ್ಳದಿದ್ದರೆ ನಮ್ಮ ಕನ್ನಡ ಭಾಷೆ ಇತಿಹಾಸ ಸೇರಿಬಿಡುತ್ತದೆ. ಎಲ್ಲರಲ್ಲೂ ಕನ್ನಡದಲ್ಲೇ ವ್ಯವಹರಿಸಿ ಕನ್ನಡದಿಂದ ಅನ್ನ ಎನ್ನುವಂತೆ ಮಾಡೋಣ ಈ ಕಾರ್ಯಕ್ಕೆ  ದಯವಿಟ್ಟು ನೀವೆಲ್ಲರೂ ನಿಮ್ಮ ಕೈ ಜೋಡಿಸಿ ಕನ್ನಡಮ್ಮನ ಸೇವೆಯಲ್ಲಿ ಪಾಲ್ಗೊಳ್ಳಿ

                                                         ।।ಜೈ ಕರ್ನಾಟಕ ಮಾತೆ।।