Wednesday 21 September 2016

ಪತ್ರಗಳು ಉಸಿರಾಡುತ್ತವೆ


ನಾನು ಸಾಹಿತ್ಯದ ಕಡೆ ಒಲವು ತೋರಿಸಿ ಬರೆಯಲು ಶುರುಮಾಡಿ ಐದು ಸಂವತ್ಸರಗಳು ಕಳೆದೆ ಹೋದವು, ಹಿಂತಿರುಗಿ ನೋಡಿದಾಗ ಎಷ್ಟೊಂದು ಖುಷಿ ,ಎಷ್ಟೊಂದು ಪುಳಕ.  ಮೊದಮೊದಲು ಕವನ ಬರೆದು ಬ್ಲಾಗ್ ಅಲ್ಲಿ ಹಾಕಿ ಸ್ನೇಹಿತರಿಗೆಲ್ಲ ಓದಿ ಓದಿ ಅಂತ ಬ್ಲಾಗ್ ಲಿಂಕ್ ನ ಪದೇ ಪದೇ ಕಳುಹಿಸುತ್ತಿದ್ದೆ. ಕನ್ನಡ ಬಾರದ ತೆಲುಗು ಭಾಷಿಕ ಮ್ಯಾನೇಜರ್ ನನ್ನು ಸಹ ಬಿಡದೆ ಓದಿ ಅಂತ ಲಿಂಕ್ ಕಳಿಸುತ್ತಿದ್ದೆ. ಆಮೇಲೆ ಗೋವರ್ಧನ್ ಸರ್ ನಂಗೆ ಮ್ಯಾನೇಜರ್ ಆದಾಗ ನನ್ನ ಕವನ ನೋಡಿ ಪ್ರೋತ್ಸಾಹಿಸಿ ಅವರ ಸ್ನೇಹಿತರಾದ ಗೋಪಾಲ್ ರವರ "ಸಂಚಲನ" ಮಾಸಪತ್ರಿಕೆಯಲ್ಲಿ ನನ್ನ ಕವನಗಳನ್ನು ಪ್ರಕಟಿಸಲು ಅವಕಾಶ ಕೊಡಿಸಿದಾಗ ಆಕಾಶವೇ ಕೈಗೆಟಕಿದಷ್ಟು ಸಂತೋಷಪಟ್ಟಿದ್ದೆ.  ಆಮೇಲೆ ಚಿಗುರಿದ್ದೇ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬ ಕನಸು. ಲೈಬ್ರರಿಗೆ ಹೋಗಿ ಎಲ್ಲ ದಿನಪತ್ರಿಕೆ ಮಾಸಪತ್ರಿಕೆಗಳ ಎಡಿಟರ್ ಮೇಲ್ ಐಡಿ ಕಲೆಹಾಕಿ ಎಲ್ಲರಿಗು ಮೇಲ್ ಕಳಿಸಿದೆ. ನಮ್ಮ ತುಮಕೂರಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ ಪ್ರಕಟವಾಗೇ ಬಿಟ್ಟಿತು, ಪ್ರಕಟವಾದ ದಿನ ಜೀವನ ಸಾರ್ಥಕವಾಯಿತು ಅಂದೆನಿಸಿಬಿಟ್ಟಿತು. ನನ್ನ ಸಾಹಿತ್ಯಾಸಕ್ತಿ ಬರಿ ಕವನಗಳಿಗೆ ಸೀಮಿತವಾಗಬಾರದು ಗದ್ಯ ಬರೆಯುವುದನ್ನೂ ರೂಡಿಸಿಕೊಳ್ಳಬೇಕು ಎಂಬ ನನ್ನ ಸ್ನೇಹಿತರ ಒತ್ತಾಸೆಯಂತೆ  ಗದ್ಯ ಬರೆಯಲು ನಿರ್ಧರಿಸಿದೆ. ಪದ್ಯ ಬರೆದಷ್ಟು ಸಲೀಸಾಗಿ ಗದ್ಯ ಬರೆಯಲು ನನಗೆ ರೂಡಿ ಇಲ್ಲ ಆದರೂ ಬಿಡದೆ ಪ್ರಯತ್ನ ಪಟ್ಟುನಿಧಾನವಾಗಿ ಅಭ್ಯಾಸಮಾಡಿ ಬರೆಯತೊಡಗಿದೆ ಒಂದೊಂದೇ ಬರಹಗಳು ಕವನಗಳ ಹಾಗೆಯೇ ಪ್ರಕಟಗೊಂಡವು. ನನ್ನ ಬರಹ ಬಂದ ಪತ್ರಿಕೆಯನ್ನು ನೋಡಲು ನಾ ಪಡುತ್ತಿದ್ದ  ಕಷ್ಟ ಅಷ್ಟಿಷ್ಟಲ್ಲ. ಆಗ ನನ್ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇರಲಿಲ್ಲ ನನ್ನ ಬರಹ ಪತ್ರಿಕೆಯಲ್ಲಿ ಪ್ರಕಟ ಆಗಿದಿಯೇ ಎಂದು ತಿಳಿದುಕೊಳ್ಳಲು ಆಫೀಸ್ ನಲ್ಲಿ ನೋಡಬೇಕು ಇಲ್ಲ ಅಂದರೆ ಪತ್ರಿಕೆ ತಂದು ನೋಡಬೇಕು, ಎಷ್ಟೋ ಬಾರಿ ಸ್ನೇಹಿತರಿಗೆ ಹೇಳಿ ತುಮಕೂರಿನಿಂದ ಪತ್ರಿಕೆಯನ್ನು ತರಿಸಿಕೊಂಡಿದ್ದಿದೆ. ನನ್ನ ಬರಹ ಪತ್ರಿಕೆಯಲ್ಲಿ ಬಂದಾಗ ಎಷ್ಟು ಖುಷಿ ಆಗುತಿತ್ತು  ಆ ಖುಷಿಯಲ್ಲಿ ನನ್ನ ಬರಹ ಬಿಟ್ಟು ಬೇರೆ ಏನನ್ನು ನೋಡುತ್ತಿರಲಿಲ್ಲ ಪದೇ ಪದೇ ನನ್ನ ಬರಹ ನೋಡಿ, ಕೈಯಿಂದ ಸವರಿ ಸಂಭ್ರಮಿಸುತ್ತಿದ್ದೆ ,ಅದರಲ್ಲೂ ಯಾರಾದರೂ ನನ್ನ ಬರಹ ಕಂಡು ಕಾಲ್ ಮಾಡಿ ಹೇಳಿದರಂತೂ ಆ ಸಂಭ್ರಮ ದುಪ್ಪಟ್ಟಾಗುತ್ತಿತ್ತು.  ಪತ್ರಿಕೆಗಳಿಂದ ಬರುತ್ತಿದ್ದ ಧನ್ಯವಾದ ಪತ್ರಗಳು ಮತ್ತೆ ಮತ್ತೆ ಬರೆಯಲು ಪ್ರೋತ್ಸಾಹಿಸುತ್ತಿದ್ದವು. ಕೆಲಸದ ಜಂಜಾಟದಲ್ಲಿ ಬರೆಯುವುದನ್ನ ಮರೆತೇಬಿಟ್ಟಿದ್ದ ನನಗೆ ಮತ್ತೆ ಬರೆಯಲು ಹೇಳಲೆಂದೇ ಕನ್ನಡಪ್ರಭದಿಂದ ಕಳುಹಿಸಿದ ವಿಶ್ವೇಶ್ವರಭಟ್ ರವರ ಸಹಿ ಇರುವ ಪತ್ರ ನನ್ನ ಕೈಸೇರಿದೆ. ಇಂತಹ ಪತ್ರಗಳು ತುಂಬಾ ಬಂದಿವೆ  ಆದರೆ ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ. ಪತ್ರಗಳು  ನಮ್ಮ ಕೈಸೇರಿದಾಗ ಇವುಗಳ ಮಹತ್ವ ಅರಿವಾಗೋದಿಲ್ಲ ಹೀಗೆ ಅಚಾನಕ್ಕಾಗಿ ಸಿಕ್ಕಾಗ ಎಲ್ಲಾ ಪುಳಕಗಳನ್ನೂ ಒಟ್ಟಿಗೆ ನೆನಪಿನಂಗಳಕ್ಕೆ ತಂದೊಡ್ಡುತ್ತವೆ, ಕಳೆದುಕೊಳ್ಳುತ್ತಿರುವ ಚಿಕ್ಕಪುಟ್ಟ ಖುಷಿಯ ಮಹತ್ವವನ್ನು ತಿಳಿಸುತ್ತವೆ. ಪತ್ರಗಳೂ ಸಹ  ಉಸಿರಾಡುತ್ತವೆ, ಅವುಗಳೂ ಉಸಿರಾಡಿ ನಮ್ಮನ್ನು ಮತ್ತು ನಮ್ಮ ಆತ್ಮವಿಶ್ವಾಸವನ್ನು ಉಸಿರಾಡುವಂತೆ ಮಾಡುತ್ತವೆ.   


--ಕವಿತಾ ಗೋಪಿಕುಂಟೆ 

3 comments:

  1. It is always good have such good CREATIVE hobbies.
    Please NOTE:
    Successful people always made their hobbies as their profession.
    eg: Sachin Tendulkar.

    ReplyDelete
    Replies
    1. Thank you Kishor, I will try my best to take writing as profession

      Delete

Note: only a member of this blog may post a comment.