Thursday 21 June 2018

ಮಾರತ್ತಳ್ಳಿ ಬ್ರಿಡ್ಜ್

ವಾರದ ಹಿಂದೆಯಷ್ಟೇ ಗೋಪಿಕ ಹೊಸ ಆಫೀಸಿಗೆ ಸೇರಿಕೊಂಡಾಗಿತ್ತು ಹೊಸ ಜಾಗ ಹೊಸ ಜನ ಎಲ್ಲವೂ ಹೊಸತು. ಸೆಕ್ಯೂರಿಟಿಯಿಂದ ಕ್ಯಾಂಟೀನ್ ಅಣ್ಣನವರೆಗೂ ಎಲ್ಲರನ್ನೂ ನಗು ನಗುತ್ತಾ ಮಾತಾಡಿಸುವ ಗೋಪಿಕ ಹಳೆ ಆಫೀಸಿನ ಗುಂಗಿನಿಂದ ಇನ್ನು ಹೊರ ಬಂದಿರಲಿಲ್ಲ. ಅವಳಿಗೆ ಹಳೆ ಆಫೀಸಿನ ಸ್ನೇಹಿತರು ಮತ್ತವರ ನೆನಪು ಕಾಡುತ್ತಲೇ ಇತ್ತು. ಹತ್ತಂತಸ್ತಿನ ಕಟ್ಟಡದಲ್ಲಿ ಗೆಳತಿಯರ ಜೊತೆ ಹಿಂಡುಹಿಂಡಾಗಿ ತಿರುಗುತ್ತಿದ್ದ ಅವಳಿಗೆ ಒಂದೇ ಫ್ಲೋರ್ ನಲ್ಲಿದ್ದ ಹೊಸ ಆಫೀಸ್ ಅಷ್ಟೇನು ರುಚಿಸಿರಲಿಲ್ಲ. ಸೀಟಿನಲ್ಲಿ ಕೂತಿದ್ದರೂ ಕ್ಯಾಂಟೀನಿಗೆ ಹೋದರೂ ಕಾಲಿಗೆ ಏನೋ ತಡವರಿಸುವ ಭಾವವೊಂದು ಕಾಡುತ್ತಿತ್ತು.
ಗೋಪಿಕಳ ಆಫೀಸ್ ಇದ್ದದ್ದು ಎಚ್ ಏ ಎಲ್ ಕಡೆಗೆ ಆದ್ದರಿಂದ ದಿನವೂ ಆಫೀಸ್ಗೆ ಹೋಗುವಾಗ ಬರುವಾಗ ಮಾರತ್ತಳ್ಳಿ ಬ್ರಿಡ್ಜ್ ನಲ್ಲಿ ಇಳಿದು ಬೇರೆ ಬಸ್ ಹಿಡಿದು ಪ್ರಯಾಣಿಸಬೇಕಿತ್ತು. ರುಚಿಸದ ಆಫೀಸ್, ಅಷ್ಟೇನೂ ಗೊತ್ತಿರದ ಸಹೋದ್ಯೋಗಿಗಳ ಮಧ್ಯೆ ಕುಳಿತು ಕೆಲಸ ಮಾಡಿ ದಿನದೂಡುವುದೇ ಅವಳಿಗೊಂದು ಸಾಹಸವಾಗಿತ್ತು.
ಹೀಗಿರುವಾಗ ಒಂದು ದಿನ ಮಣಿ ಪೋಣಿಸುವ ರೀತಿ ಒಂದರ ಹಿಂದೊಂದು ಮೀಟಿಂಗ್ ಅಟೆಂಡ್ ಮಾಡಿ ಒಂದು ಕಪ್ಪು ಚಹಾ ಸಹ ಕುಡಿಯದೆ ಮನೆಗೆ ಹೊರಟಳು.  ಮಾರತ್ತಳ್ಳಿ ಬ್ರಿಡ್ಜ್ ನಲ್ಲಿ ಬಸ್ ಇಳಿದಾಗ ಚಹಾದ ನೆನಪಾಗಿ ಅಲ್ಲೇ ಇದ್ದ ಒಂದು ಪುಟ್ಟ ಹೋಟೆಲ್ಲಿಗೆ ನುಗ್ಗಿ ಚಹಾ ಕೊಂಡು ಆಚೆ ಬಂದು ನಿಂತು ಚಹಾ ಹೀರುತ್ತಾ ಸುತ್ತ ಮುತ್ತ ಗಮನಿಸುತ್ತಾ ನಿಂತಳು. 
ಮಾರತ್ತಳ್ಳಿ ಬ್ರಿಡ್ಜ್ ತುಂಬಾ ಸ್ಥಳಗಳಿಗೆ ಕನೆಕ್ಷನ್ ಕೊಡುವ ಜಾಗವಾದ್ದರಿಂದ ತನ್ನ ಎರೆಡು ಕೈಕಾಲುಗಳನ್ನು ಚಾಚಿ ಭುವಿಯನ್ನು ಅಪ್ಪಿ ಮಲಗಿದಂತಿತ್ತು.  ಬಸ್ ಸ್ಟಾಪ್ ಗಳಲ್ಲಿ ಜನಗಳೇ ತುಂಬಿ ಜೇನು ಗೂಡಿನಂತೆ ಕಾಣುತ್ತಿತ್ತು. ರಸ್ತೆ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರಿಗಳ ವ್ಯಾಪಾರ ಅವಳಿಗೆ ಅವಳ ಊರಿನ ಸಂತೆಯ ನೆನಪನ್ನ ಮರುಕಳಿಸಿತು. ಅಲ್ಲೇ ಅಲ್ಪ ಸ್ವಲ್ಪ ದೂರಲ್ಲಿ ಕೈಕಾಲು ಕಳೆದುಕೊಂಡು ಭಿಕ್ಷೆ ಬೇಡುವವರ ಕಂಡು ಮೂಕ ಮನಸಿನಿಂದ ದೇವರ ಶಪಿಸಲು ತಲೆ ಎತ್ತಿ ಆಕಾಶದೆಡೆಗೆ ಕಣ್ಣುಬಿಟ್ಟಾಗ ಅವಳಿಗೆ ಕಂಡದ್ದು ತೂಗುಸೇತುವೆ. ಆ ಕಡೆ ಈ ಕಡೆ ಹತ್ತಿ ಇಳಿಯಲು ಮೆಟ್ಟಿಲು ಕೊಟ್ಟು ಹತ್ತಲಾಗದವರಿಗೆಂದೇ ಲಿಫ್ಟ್ ಇಟ್ಟು ತೂಗುಬಿಟ್ಟ ತೂಗುಯ್ಯಾಲೆಯಂತೆಯೇ ಕಂಡ ಆ ತೂಗುಸೇತುವೆ ಅವಳನ್ನ ಇಂಚು ಇಂಚಾಗಿ ಆಕರ್ಷಿಸಿದ್ದಲ್ಲದೆ ಬಾ ಬಾ ಎಂದು ಕೈ ಬೀಸಿ ಕರೆದಂತಾಯಿತು. ಚಹಾ ಕುಡಿದು ಮುಗಿಸಿ ಅಲ್ಲೇ ಇದ್ದ ಕಸದ ಬುಟ್ಟಿಗೆ ಚಹಾದ ಕಪ್ ಎಸೆದು ಬ್ಯಾಗನ್ನು ಹೆಗಲಿಗೇರಿಸಿಕೊಂಡವಳೇ ಒಂದೊಂದೇ ಮೆಟ್ಟಿಲೇರಿ ಏದುಸಿರು ಬಿಡುತ್ತಾ ತೂಗುಯ್ಯಾಲೆಯ ಸೇರಿ ನಿಂತೇ ಬಿಟ್ಟಳು.
ಹಾಗೆ ಸುತ್ತಲೂ ಕಣ್ಣಾಡಿಸುವಾಗ ಬಲಭಾಗದಲ್ಲಿ ಆನಂದಭವನ ಎಡಭಾಗಕ್ಕೆ ಸಾಯಿದರ್ಶಿನಿ ಹೋಟೆಲ್ಲುಗಳು ಮುಂದೆ ಹಿಂದೆ ನೋಡಿದರೆ ದೊಡ್ಡ ದೊಡ್ಡ ಜಾಹಿರಾತು ಫಲಕಗಳು. ಭಯಪಡುತ್ತಲೇ ಕೆಳಗೆ ನೋಡಿದರೆ ಅಂಕುಡೊಂಕಾದ ಸೀಳಿ ಇಬ್ಭಾಗವಾದ ರಸ್ತೆ, ಒಂದು ಕಡೆ ಹೋಗುವ ವಾಹನಗಳು ಮತ್ತೊಂದು ಕಡೆ ಬರುವ ವಾಹನಗಳು ಸಾಲಾಗಿ ಇರುವೆ ಸಾಲಿನಂತೆ  ಚಲಿಸುತ್ತಿರುವುದನ್ನು  ನೋಡುತ್ತಾ ನಿಂತುಬಿಟ್ಟಳು. ಹಾಗೆ ಸುಧಾರಿಸಿಕೊಳ್ಳುತ್ತ ನಿಂತಿರುವಾಗ ಬ್ರಿಡ್ಜ್ ಮೇಲೆ ಆಕಡೆ ಈಕಡೆ ಓಡಾಡುವ ಜನಗಳ ಗಜಿಬಿಜಿ  ಒಂದು ಕಡೆ , ಏನನ್ನೋ ಪಿಸುಗುಡುತ್ತಾ ಕೈ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಪ್ರೇಮಿಗಳ ಕಲರವ ಇನ್ನೊಂದು ಕಡೆ. ವಾಹನಗಳ ಹಾರನ್ ನ ಝೇಂಕಾರ ಮತ್ತೊಂದು ಕಡೆ ಈ ಎಲ್ಲದರ ಮಧ್ಯೆ ತನ್ನನ್ನು ತಾನು ಮರೆತುಬಿಟ್ಟಳು.
ಸೂರ್ಯ ತನ್ನಪಾಳಿ ಮುಗಿಸಿ ಬೀಳ್ಕೊಡುತ್ತಿದ್ದಾಗ ನಿಧಾನವಾಗಿ ಕತ್ತಲು ಅವರಿಸತೊಡಗಿತು. ಆಫೀಸ್ ಮುಗಿಸಿ ಮನೆಗೆ ಹೊರಡುವವರ ಸಂಖ್ಯೆಯೂ ಜಾಸ್ತಿಯಾಗಿ ರೋಡ್ ತುಂಬೆಲ್ಲಾ ಕಾರ್ ಮತ್ತು ಬೈಕ್ ಗಳು ಜಾಸ್ತಿಯಾದವು.  ಮಿಣ ಮಿಣ ಮಿರುಗುವ ವಾಹನಗಳ ಹಿಂಬದಿ ಮುಂಬದಿ ಲೈಟುಗಳು,ಕಟ್ಟಡಗಳ ಮೇಲೆ ಮಿನುಗುತ್ತಿದ್ದ ಸೀರಿಯಲ್ ಸೆಟ್ ಗಳು, ರಸ್ತೆ ಬದಿ ವ್ಯಾಪಾರದವರ ಜಗಮಗ ಲೈಟುಗಳು ಇಡೀ ರಸ್ತೆಗೆ ಮೆರುಗು ತಂದಿಟ್ಟವು.
 ಜಗದ ಪರಿವೇ ಇಲ್ಲದೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಚಿತ್ತಾಕರ್ಷಕ ಲೈಟ್ಗಳನ್ನು ನೋಡಿ ಸಂಭ್ರಮಿಸುತ್ತಿದ್ದ ಗೋಪಿಕಳನ್ನ ಆ ಸೀಳಿದ ರಸ್ತೆ ಗಬಕ್ಕನೇ ಸೆಳೆದು ಬಿಟ್ಟಿತು. ಆ ಅಂಕುಡೊಂಕಾದ ರಸ್ತೆಯಲ್ಲಿ ಕೆಂಪುಲೈಟು ಹತ್ತಿಸಿಕೊಂಡು ಹೋಗುವ ವಾಹನಗಳು ಒಂದೆಡೆ, ಬಿಳಿ ಲೈಟು ಹತ್ತಿಸಿಕೊಂಡು ಬರುವ ವಾಹನಗಳ ಹಿಂಡು ಇನ್ನೊಂದು ಕಡೆ, ಈ ದೃಶ್ಯ ಅವಳನ್ನ ಬೇರೊಂದು ಲೋಕಕ್ಕೆ ಕರೆದೊಯ್ಯಿತು.
ಜನ ಅಥವಾ ಜಾಗ ನಮ್ಮ ಜೀವನಕ್ಕೆ ಬರುವಾಗ ಬಿಳಿಯ ಲೈಟಿನ ತರಹ ಬರುತ್ತವೆ ನಾವು ಅದನ್ನ ಅಷ್ಟು ಗಮನಿಸುವುದಿಲ್ಲ, ನಮ್ಮ ಜೀವನದಿಂದ ಆಚೆ ಸರಿವಾಗ ಕೆಂಪು ಲೈಟಿನ ತರಹ ಸರಿಯುತ್ತವೆ.  ಜೀವನಕ್ಕೆ ಬರುವುದು ಹೋಗುವುದು ಎರೆಡೂ ಸಾಮಾನ್ಯ ಆದರೆ ಬರುವುದಕ್ಕಿಂತ ಹೋಗುವಾಗಲೇ ನಮ್ಮನ್ನ ಹೆಚ್ಚು ಕಾಡುವುದು.
ಹಾಗೆಯೆ ಕೆಲವೊಂದು ಸಾರಿ ನಮ್ಮ ಸ್ನೇಹ ಮಾಡುವ ಮೊದಮೊದಲು ಬಹುತೇಕರು ಬಿಳಿ ಲೈಟಿನ ತರಹ ಒಳ್ಳೆ ಗುಣಗಳನ್ನ ಮಾತ್ರ ಪ್ರದರ್ಶಿಸುತ್ತಾರೆ, ಸಣ್ಣಪುಟ್ಟ ಮನಸ್ತಾಪಕ್ಕೋ ಅಥವಾ  ಜಗಳಗಳಿಂದಲೋ ದೂರ ಸರಿವಾಗ ತಮ್ಮ ನಿಜಗುಣಗಳನ್ನ ಕೆಂಪು ಲೈಟಿನ ತರಹ ತೋರಿಸಿ ದೂರವಾಗುತ್ತಾರೆ. ಸ್ನೇಹ ಮಾಡಿದಾಗ ತುಂಬಾ ಕಾಳಜಿ ವಹಿಸುತ್ತಾರೆ ಆ ಕಾಳಜಿ ಎಷ್ಟಿರುತ್ತದೆ ಎಂದರೆ ನಾವು ಕೂಡ ನಮ್ಮ ಬಗ್ಗೆ ಅಷ್ಟೊಂದು ಕಾಳಜಿಯಿಂದ ಯೋಚನೆ ಮಾಡಿರುವುದಿಲ್ಲ ಬರುಬರುತ್ತಾ ಕಾಳಜಿ ಎನ್ನುವ ಹೆಸರಲ್ಲಿ ನಮ್ಮನ್ನ ನಿಯಂತ್ರಿಸೋಕೆ ಶುರುಮಾಡುತ್ತಾರೆ. ಅವರು ಅತಿಯಾಗಿ ನಿಯಂತ್ರಿಸುವಾಗಲೇ ಅವರ ಆ ಕೆಂಪು ಲೈಟಿನ ತರಹದ ಇನ್ನೊಂದು ಮುಖ ನಮಗೆ ಗೊತ್ತಾಗುವುದು ಅಂದೆನಿಸೋಕೆ ಶುರುವಾಗುತ್ತದೆ ಅವಳಿಗೆ. 
ಈ ಆಲೋಚನೆ ಬಂದ ಮೇಲೆ ಅವಳಿಗೆ ಅವಳ ಹಳೆಯ ಆಫೀಸ್ ಕಾಡುತ್ತಿರುವುದು ಸಹಜ ಎಂದೆನಿಸತೊಡಗಿತು, ಮುಂದೊಂದು ದಿನ ಈಗ ಇರುವ ಆಫೀಸ್ ಬಿಟ್ಟು ಹೋಗುವಾಗಲೂ ಸಹ ಇದೇ ಭಾವ ನನ್ನಲ್ಲಿ ಬರಬಹುದು ಎಂದೆನಿಸಿ ನಿಟ್ಟುಸಿರು ಬಿಟ್ಟು ತೂಗುಸೇತುವೆ ಇಳಿದು ಮನೆ ಸೇರಲು ಬಸ್ ಹಿಡಿದು ಕೂರುತ್ತಾಳೆ. ಅವಳು ಮನೆಕಡೆ ಮುಖ ಮಾಡಿದ್ದರೂ ಮನಸ್ಸು ಮಾತ್ರ ಗೊಂದಲದ ಗೂಡಾಗಿ ಮಾರತ್ತಳ್ಳಿ ಬ್ರಿಡ್ಜ್ ಮೇಲೆಯೇ ತೂಗುತ್ತದೆ, ತರತರದ ಯೋಚನೆಗಳಿಂದ ತಲೆಯು ಇಸ್ತ್ರಿಪೆಟ್ಟಿಗೆಯ ತರ ಬಿಸಿಯಾಗುತ್ತದೆ, ಈ ಎಲ್ಲದರಿಂದ ಆಚೆ ಬರಲು ತನ್ನಿಷ್ಟದ ಹಾಡುಗಳನ್ನು ಕೇಳುತ್ತಾ ಕಿಟಕಿಗೊರಗಿ ಕಣ್ಣು ಮುಚ್ಚುತ್ತಾಳೆ. ಆದರೂ ಮಾರತ್ತಳ್ಳಿಬ್ರಿಡ್ಜ್  ಮತ್ತು ತೂಗುಸೇತುವೆ ಅವಳ ಮನಸ್ಸನ್ನಪ್ಪಿ ಹಚ್ಚೆಒತ್ತಿ ಕಾಡುತ್ತಲೇ ಇತ್ತು.

            ಇಂತಿ,
                                 ಕವಿತಾ ಗೋಪಿಕುಂಟೆ 

Tuesday 5 June 2018

5/6/2018 ರ ತುಮಕೂರು ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ "ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ"

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ನೀಡಿ ಪುರುಷರಿಗೆ ಸಮನಾಗಿ ನಿಲ್ಲುತ್ತಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ಸಾಕಷ್ಟು ಬಲಿಷ್ಠರಾಗಿದ್ದಾರೆ, ಶೈಕ್ಷಣಿಕವಾಗಿಯೂ ಮಹಿಳೆಯರದ್ದೇ ಮೇಲುಗೈ ಹೀಗಿರುವಾಗ ರಾಜಕೀಯವಾಗಿ ಬೆಳೆಯಲು ಪೂರಕವಾದ ವಾತಾವರಣ ನಮ್ಮಲ್ಲಿ ಇನ್ನು ಸಾಧ್ಯವಾಗುತ್ತಿಲ್ಲ. 130ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಲೋಕಸಭೆಯಲ್ಲಿ ಇರುವ ಒಟ್ಟು 543ಸ್ಥಾನದಲ್ಲಿ ಮಹಿಳೆಯರಿಗೆ ದಕ್ಕಿರುವುದು ಕೇವಲ  66 ಸ್ಥಾನಗಳು ಶೇಕಡಾವಾರು ಕೇವಲ 12.15% ಮಾತ್ರ. 
ಮೊನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇರುವ ಒಟ್ಟು 222 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿರುವುದು ಕೇವಲ 7 ಕ್ಷೇತ್ರಗಳು, ಶೇಕಡಾವಾರು 3.15% ಮಾತ್ರ. ಆರೂವರೆ ಕೋಟಿ ಜನಸಂಖ್ಯೆ ಇರುವ ನಮ್ಮ ಕರ್ನಾಟಕದಲ್ಲಿ ಪುರುಷರು ಮತ್ತು ಮಹಿಳೆಯರು ಸಮಬಲದಲ್ಲಿದ್ದರೂ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಭಾರಿ ಕಡಿಮೆ ಪ್ರಮಾಣದಲ್ಲಿರುವುದು ಶೋಚನೀಯ ಸಂಗತಿ.
ಈಗಾಗಲೇ ಇಂದಿರಾಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಜಯಲಲಿತರಂತಹ ದಿಟ್ಟ ಮಹಿಳೆಯರು ರಾಷ್ಟ್ರ ಮತ್ತು ರಾಜ್ಯಗಳನ್ನು ನಿಭಾಯಿಸಿ ತೋರಿಸಿದ್ದಾರೆ. ಈಗಿರುವ ಕೇಂದ್ರ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಮತ್ತು ನಿರ್ಮಲ ಸೀತಾರಾಮನ್ ರವರುಗಳು ತಮ್ಮ ಜವಾಬ್ದಾರಿಗಳನ್ನು ಪುರುಷರಿಗಿಂತ ಕಡಿಮೆಯಿಲ್ಲದಂತೆ ನಿಭಾಯಿಸುತ್ತಿದ್ದಾರೆ
ಕಾರ್ಪೊರೇಟ್ ವಲಯದಲ್ಲಿ ಕಿರಣ್ ಮಝುನ್ದಾರ್ ಷಾ , ಬ್ಯಾಂಕ್ ವಲಯದಲ್ಲಿ ಅರುಂಧತಿ ಭಟ್ಟಾಚಾರ್ಯ, ಚಂದ ಕೊಚ್ಚಾರ್ ರಂತವರುಗಳು ದೊಡ್ಡ ಹುದ್ದೆಗಳನ್ನು ಮಹಿಳೆಯರೂ ಕೂಡ ನಿಭಾಯಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಮನೆ ನೆಡೆಸುವುದರಿಂದ ಹಿಡಿದು ದೇಶ ಮುನ್ನೆಡೆಸುವುದರವರೆಗೆ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯರೇ ಎಂದು ಸಾಬೀತಾಗಿದ್ದರೂ ರಾಜಕೀಯದಲ್ಲಿ  ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಹೆಚ್ಚಿನ ಅವಕಾಶಗಳು ದೊರೆಯದಿರುವುದು ಯೋಚಿಸಬೇಕಾದ ಸಂಗತಿ.
ಮಹಿಳೆಯರ ಯೋಚನಾ ಲಹರಿ ಮತ್ತು ಪುರುಷರ ಯೋಚನಾಲಹರಿ ಬೇರೆ ಬೇರೆ, ಪುರುಷರೇ ಹೆಚ್ಚಾಗಿರುವ ಸದನದಲ್ಲಿ ಮಹಿಳೆಯರ ಮಾತಿಗೆ ಮನ್ನಣೆ ಸಿಗುವುದು ಕಷ್ಟ. ಮಹಿಳೆಯರ ಸಂಖ್ಯೆ ಕಡಿಮೆ ಇರುವ ಈಗಿನ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಂದ ಮಹಿಳೆಯರು ಹೊರಗುಳಿಯುವುದರಿಂದ ಮಹಿಳಾ ಸಬಲೀಕರಣಕ್ಕೆ ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಈಗಿನ ಸರ್ಕಾರಗಳು ವಿಫಲವಾಗಿವೆ ಎಂದೆನಿಸುತ್ತಿದೆ.
ಈಗಿನ ಬಹುತೇಕ ಚುನಾವಣೆಗಳಲ್ಲಿ ಮಹಿಳೆಯರಿಗಾಗಿ ಮೀಸಲಾತಿಯಿದೆ ಇದು ಸ್ವಾಗತಾರ್ಹವೇ ಆದರು ಮೀಸಲಾತಿ ಇರುವ ಕಡೆ ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಮಹಿಳೆಯರು ರಾಜಕಾರಣಿಗಳ  ಹೆಂಡತಿ ಮಗಳು ಅಥವಾ ರಾಜಕೀಯ ಕುಟುಂಬದ ಸಂಬಂಧಿಗಳಾಗಿರುತ್ತಾರೆ, ಇಂತಹ ಹಿನ್ನೆಲೆಯಿಂದ ಚುನಾಯಿತರಾದ ಬಹುತೇಕ ಮಹಿಳೆಯರು ಡಮ್ಮಿಗಳಾಗಿರುತ್ತಾರೆ ಅಧಿಕಾರವೆಲ್ಲವೂ ಅವರ ಮನೆಯ ಗಂಡಸರದ್ದೇ ಆಗಿರುತ್ತದೆ. ಅಧಿಕಾರ ಗಂಡಸರದ್ದಿರುವಾಗ ಮಹಿಳೆಯರಿಗಾಗಿ ಸಮಾಜದಲ್ಲಿ ಬದಲಾವಣೆ ತರುವುದು ಹೇಗೆ ಸಾಧ್ಯ ?
ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಭೆ ಮತ್ತು ನಾಯಕತ್ವದ ಗುಣ ಇರುವವರು ಒಳ್ಳೆಯ ನಾಯಕರಾಗಬಹುದೇವರತು ರಾಜಕೀಯ ನಾಯಕರಾಗುವುದು ಕಷ್ಟಸಾಧ್ಯ.
ಹಣ ಬಲ ಮತ್ತು ತೋಳ್ಬಲ ಇರುವವರು ಮಾತ್ರ ರಾಜಕೀಯ ನಾಯಕರಾಗಬಹುದು ಎಂಬ ಮಾತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಪ್ರತಿಭಾವಂತ ಮಹಿಳೆಯರಿಗೆ ಅವಕಾಶಗಳು ಸಿಕ್ಕಿ , ಸಮಾಜದಲ್ಲಿ ಈಗಿರುವ ರಾಜಕೀಯದ ಬಗೆಗಿನ ಅಭಿಪ್ರಾಯಗಳು ಬದಲಾದರೆ,
ಎಲ್ಲಾ ಎಲ್ಲೆಗಳ ಗೋಡೆಗಳನ್ನು ಕೆಡವಿ ಸಮರ್ಥನಾಯಕಿಯರು ನಮ್ಮ ಜನಪ್ರತಿನಿಧಿಗಳಾಗುವ ಕಾಲವು ದೂರವಿಲ್ಲ. ಮಹಿಳಾ ಮುಖ್ಯಮಂತ್ರಿಯು ನಮ್ಮ ಕರ್ನಾಟಕವನ್ನಾಳುವ ಕನಸು ನನಸಾಗದೇ ಇರುವುದಿಲ್ಲ.
               ಇಂತಿ,
                                    ಕವಿತಾ ಗೋಪಿಕುಂಟೆ