Wednesday, 21 September 2016

ಪತ್ರಗಳು ಉಸಿರಾಡುತ್ತವೆ


ನಾನು ಸಾಹಿತ್ಯದ ಕಡೆ ಒಲವು ತೋರಿಸಿ ಬರೆಯಲು ಶುರುಮಾಡಿ ಐದು ಸಂವತ್ಸರಗಳು ಕಳೆದೆ ಹೋದವು, ಹಿಂತಿರುಗಿ ನೋಡಿದಾಗ ಎಷ್ಟೊಂದು ಖುಷಿ ,ಎಷ್ಟೊಂದು ಪುಳಕ.  ಮೊದಮೊದಲು ಕವನ ಬರೆದು ಬ್ಲಾಗ್ ಅಲ್ಲಿ ಹಾಕಿ ಸ್ನೇಹಿತರಿಗೆಲ್ಲ ಓದಿ ಓದಿ ಅಂತ ಬ್ಲಾಗ್ ಲಿಂಕ್ ನ ಪದೇ ಪದೇ ಕಳುಹಿಸುತ್ತಿದ್ದೆ. ಕನ್ನಡ ಬಾರದ ತೆಲುಗು ಭಾಷಿಕ ಮ್ಯಾನೇಜರ್ ನನ್ನು ಸಹ ಬಿಡದೆ ಓದಿ ಅಂತ ಲಿಂಕ್ ಕಳಿಸುತ್ತಿದ್ದೆ. ಆಮೇಲೆ ಗೋವರ್ಧನ್ ಸರ್ ನಂಗೆ ಮ್ಯಾನೇಜರ್ ಆದಾಗ ನನ್ನ ಕವನ ನೋಡಿ ಪ್ರೋತ್ಸಾಹಿಸಿ ಅವರ ಸ್ನೇಹಿತರಾದ ಗೋಪಾಲ್ ರವರ "ಸಂಚಲನ" ಮಾಸಪತ್ರಿಕೆಯಲ್ಲಿ ನನ್ನ ಕವನಗಳನ್ನು ಪ್ರಕಟಿಸಲು ಅವಕಾಶ ಕೊಡಿಸಿದಾಗ ಆಕಾಶವೇ ಕೈಗೆಟಕಿದಷ್ಟು ಸಂತೋಷಪಟ್ಟಿದ್ದೆ.  ಆಮೇಲೆ ಚಿಗುರಿದ್ದೇ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬ ಕನಸು. ಲೈಬ್ರರಿಗೆ ಹೋಗಿ ಎಲ್ಲ ದಿನಪತ್ರಿಕೆ ಮಾಸಪತ್ರಿಕೆಗಳ ಎಡಿಟರ್ ಮೇಲ್ ಐಡಿ ಕಲೆಹಾಕಿ ಎಲ್ಲರಿಗು ಮೇಲ್ ಕಳಿಸಿದೆ. ನಮ್ಮ ತುಮಕೂರಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ ಪ್ರಕಟವಾಗೇ ಬಿಟ್ಟಿತು, ಪ್ರಕಟವಾದ ದಿನ ಜೀವನ ಸಾರ್ಥಕವಾಯಿತು ಅಂದೆನಿಸಿಬಿಟ್ಟಿತು. ನನ್ನ ಸಾಹಿತ್ಯಾಸಕ್ತಿ ಬರಿ ಕವನಗಳಿಗೆ ಸೀಮಿತವಾಗಬಾರದು ಗದ್ಯ ಬರೆಯುವುದನ್ನೂ ರೂಡಿಸಿಕೊಳ್ಳಬೇಕು ಎಂಬ ನನ್ನ ಸ್ನೇಹಿತರ ಒತ್ತಾಸೆಯಂತೆ  ಗದ್ಯ ಬರೆಯಲು ನಿರ್ಧರಿಸಿದೆ. ಪದ್ಯ ಬರೆದಷ್ಟು ಸಲೀಸಾಗಿ ಗದ್ಯ ಬರೆಯಲು ನನಗೆ ರೂಡಿ ಇಲ್ಲ ಆದರೂ ಬಿಡದೆ ಪ್ರಯತ್ನ ಪಟ್ಟುನಿಧಾನವಾಗಿ ಅಭ್ಯಾಸಮಾಡಿ ಬರೆಯತೊಡಗಿದೆ ಒಂದೊಂದೇ ಬರಹಗಳು ಕವನಗಳ ಹಾಗೆಯೇ ಪ್ರಕಟಗೊಂಡವು. ನನ್ನ ಬರಹ ಬಂದ ಪತ್ರಿಕೆಯನ್ನು ನೋಡಲು ನಾ ಪಡುತ್ತಿದ್ದ  ಕಷ್ಟ ಅಷ್ಟಿಷ್ಟಲ್ಲ. ಆಗ ನನ್ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇರಲಿಲ್ಲ ನನ್ನ ಬರಹ ಪತ್ರಿಕೆಯಲ್ಲಿ ಪ್ರಕಟ ಆಗಿದಿಯೇ ಎಂದು ತಿಳಿದುಕೊಳ್ಳಲು ಆಫೀಸ್ ನಲ್ಲಿ ನೋಡಬೇಕು ಇಲ್ಲ ಅಂದರೆ ಪತ್ರಿಕೆ ತಂದು ನೋಡಬೇಕು, ಎಷ್ಟೋ ಬಾರಿ ಸ್ನೇಹಿತರಿಗೆ ಹೇಳಿ ತುಮಕೂರಿನಿಂದ ಪತ್ರಿಕೆಯನ್ನು ತರಿಸಿಕೊಂಡಿದ್ದಿದೆ. ನನ್ನ ಬರಹ ಪತ್ರಿಕೆಯಲ್ಲಿ ಬಂದಾಗ ಎಷ್ಟು ಖುಷಿ ಆಗುತಿತ್ತು  ಆ ಖುಷಿಯಲ್ಲಿ ನನ್ನ ಬರಹ ಬಿಟ್ಟು ಬೇರೆ ಏನನ್ನು ನೋಡುತ್ತಿರಲಿಲ್ಲ ಪದೇ ಪದೇ ನನ್ನ ಬರಹ ನೋಡಿ, ಕೈಯಿಂದ ಸವರಿ ಸಂಭ್ರಮಿಸುತ್ತಿದ್ದೆ ,ಅದರಲ್ಲೂ ಯಾರಾದರೂ ನನ್ನ ಬರಹ ಕಂಡು ಕಾಲ್ ಮಾಡಿ ಹೇಳಿದರಂತೂ ಆ ಸಂಭ್ರಮ ದುಪ್ಪಟ್ಟಾಗುತ್ತಿತ್ತು.  ಪತ್ರಿಕೆಗಳಿಂದ ಬರುತ್ತಿದ್ದ ಧನ್ಯವಾದ ಪತ್ರಗಳು ಮತ್ತೆ ಮತ್ತೆ ಬರೆಯಲು ಪ್ರೋತ್ಸಾಹಿಸುತ್ತಿದ್ದವು. ಕೆಲಸದ ಜಂಜಾಟದಲ್ಲಿ ಬರೆಯುವುದನ್ನ ಮರೆತೇಬಿಟ್ಟಿದ್ದ ನನಗೆ ಮತ್ತೆ ಬರೆಯಲು ಹೇಳಲೆಂದೇ ಕನ್ನಡಪ್ರಭದಿಂದ ಕಳುಹಿಸಿದ ವಿಶ್ವೇಶ್ವರಭಟ್ ರವರ ಸಹಿ ಇರುವ ಪತ್ರ ನನ್ನ ಕೈಸೇರಿದೆ. ಇಂತಹ ಪತ್ರಗಳು ತುಂಬಾ ಬಂದಿವೆ  ಆದರೆ ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ. ಪತ್ರಗಳು  ನಮ್ಮ ಕೈಸೇರಿದಾಗ ಇವುಗಳ ಮಹತ್ವ ಅರಿವಾಗೋದಿಲ್ಲ ಹೀಗೆ ಅಚಾನಕ್ಕಾಗಿ ಸಿಕ್ಕಾಗ ಎಲ್ಲಾ ಪುಳಕಗಳನ್ನೂ ಒಟ್ಟಿಗೆ ನೆನಪಿನಂಗಳಕ್ಕೆ ತಂದೊಡ್ಡುತ್ತವೆ, ಕಳೆದುಕೊಳ್ಳುತ್ತಿರುವ ಚಿಕ್ಕಪುಟ್ಟ ಖುಷಿಯ ಮಹತ್ವವನ್ನು ತಿಳಿಸುತ್ತವೆ. ಪತ್ರಗಳೂ ಸಹ  ಉಸಿರಾಡುತ್ತವೆ, ಅವುಗಳೂ ಉಸಿರಾಡಿ ನಮ್ಮನ್ನು ಮತ್ತು ನಮ್ಮ ಆತ್ಮವಿಶ್ವಾಸವನ್ನು ಉಸಿರಾಡುವಂತೆ ಮಾಡುತ್ತವೆ.   


--ಕವಿತಾ ಗೋಪಿಕುಂಟೆ 

Wednesday, 9 December 2015

ಜಪಾನ್ ಮತ್ತು ಭಾರತೀಯ ಸಂಸ್ಕೃತಿಗಿರುವ ಸಾಮ್ಯತೆಗಳು



ಜಪಾನ್ ಮತ್ತು ಭಾರತ ದೇಶಗಳ ಸ್ನೇಹ ಸಂಬಂಧ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದ ಭಾರತ ಮತ್ತು ಜಪಾನ್ ಒಳ್ಳೆಯ ಸ್ನೇಹವನ್ನು ಕಾಪಾಡಿಕೊಂಡು ಬಂದಿವೆ.
ಹಾಗೆಯೇ ನಮ್ಮ ಮತ್ತು ಜಪಾನ್  ಸಂಸ್ಕೃತಿಗೆ ಬಹಳ ಸಾಮ್ಯತೆಗಳಿವೆ. ಆ ಸಾಮ್ಯತೆಗಳನ್ನು ಸಂಕ್ಷಿಪ್ತವಾಗಿ ನೋಡೋಣ.
* ಜಪಾನ್ ಭಾಷೆ ನಮ್ಮ ಭಾರತದ ಭಾಷೆಯಲ್ಲಿ ಇರುವಂತೆಯೇ ಅಕ್ಷರಗಳನ್ನು ಮತ್ತು ಉಚ್ಚಾರಣೆಯನ್ನು ಹೊಂದಿದೆ.  ನಮ್ಮ ಭಾಷೆಗಳ ವ್ಯಾಕರಣ ಮತ್ತು ಜಪಾನ್ ಭಾಷೆಯ ವ್ಯಾಕರಣ ಒಂದೇ ಆಗಿದೆ.
* ಜಪಾನ್ ಜನರು ಹಿರಿಯರಿಗೆ ತೊಂಬತ್ತು ಡಿಗ್ರಿ ಗೆ ಬಗ್ಗಿ ನಮಸ್ಕರಿಸಿದರೆ ನಾವುಗಳು ಹಿರಿಯರ ಕಾಲು ಮುಟ್ಟಿ ನಮಸ್ಕರಿಸುತ್ತೇವೆ
* ನಮ್ಮಲ್ಲಿರುವಂತೆಯೇ ಜಪಾನಿನಲ್ಲಿ ಶಿಂತೋ ಮತ್ತು ಬೌದ್ದ ಧರ್ಮಗಳಿವೆ. ಜಪಾನ್ ಜನರು ನಮ್ಮಂತೆಯೇ ಹುಟ್ಟು ಸಾವಿಗೆ ದೇವರೇ ಕಾರಣ ಎಂದು ನಂಬಿಕೆ ಉಳ್ಳವರು.
* ದೈವವನ್ನು ನಂಬುವ ಹಾಗೆ ದೆವ್ವವನ್ನು ನಂಬುತ್ತಾರೆ. ದೆವ್ವವನ್ನು ಹೋಡಿಸಿ ಒಳ್ಳೆಯತನವನ್ನು ಬರಮಾಡಿಕೊಳ್ಳಲು ಬೀನ್ಸ್ ಕಾಳನ್ನು ಎಸೆದು ಹಬ್ಬದ ರೀತಿ ಆಚರಿಸುತ್ತಾರೆ
* ನಮ್ಮ ಹೆಣ್ಣುಮಕ್ಕಳು ಸೀರೆ ಹುಡುವ ರೀತಿ ಜಪಾನ್ ಹೆಣ್ಣು ಮಕ್ಕಳು ಕಿಮೋನೋ ಎನ್ನುವ ಸಾಂಪ್ರದಾಯಿಕ ಉಡುಗೆಯನ್ನು ತೊಡುತ್ತಾರೆ , ಕಿಮೋನೋ ವು ನಮ್ಮ ಸೀರೆಯ ತರಹವೇ ಇರುತ್ತದೆ.ನಮ್ಮಲ್ಲಿ ಇದ್ದಂತೆಯೇ ಜಪಾನಿನಲ್ಲಿ ಕೂಡ ಅವಿಭಕ್ತ ಕುಟುಂಬಗಳು ಇದ್ದವು. ನಮ್ಮಲ್ಲಿಯಂತೆಯೇ ಮನೆಯ ಹಿರಿಕರೇ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಆದರೆ ಈಗ ನಮ್ಮಲ್ಲಿ ಇರುವಂತೆಯೇ ವಿಭಕ್ತ ಕುಟುಂಬಗಳು ಜಾಸ್ತಿಯಾಗಿವೆ. ನಮ್ಮ ಸಮಾಜದಲ್ಲಿ ಇರುವಂತೆಯೇ ಜಪಾನಿನಲ್ಲಿಯೂ ಸಹ ಪುರುಷ ಪ್ರಧಾನ ಸಮಾಜವಿತ್ತು. ಹೆಣ್ಣು ಮಕ್ಕಳನ್ನು ಮನೆಯಿಂದ ಆಚೆ ಕಳಿಸುತ್ತಿರಲಿಲ್ಲ ಆದರೆ ಎರಡನೇ ಮಹಾಯುದ್ದದ ನಂತರ ಪರಿಸ್ಥಿತಿ ಬದಲಾಗಿದೆ
* ನಮ್ಮ ಹೊಸ ವರ್ಷಾಚರಣೆಯಂತೆ ಜಪಾನಿಯರು ಸಹ ಹೊಸ ವರ್ಷದಂದು ದೇವಸ್ತಾನಗಳಿಗೆ ಭೇಟಿ ನೀಡುತ್ತಾರೆ.
ನಮ್ಮಲ್ಲಿ ಹೆಣ್ಣುಮಕ್ಕಳು ಋತುಮತಿಯಾದಾಗ ಆಚರಿಸುವ ಆಚರಣೆಯಂತೆಯೇ, ಜಪಾನಿನಲ್ಲೂ ಹೆಣ್ಣು ಮಕ್ಕಳು ಇಪ್ಪತ್ತು ವರ್ಷಕ್ಕೆ ಬಂದಾಗ ಸೆಯಿಜಿನ್ ನೋ ಹಿ ಎಂದು ಆಚರಿಸುತ್ತಾರೆ.
* ನಮ್ಮ  ದಸರಾ ಹಬ್ಬದಲ್ಲಿ ನಾವು ಬೊಂಬೆಗಳನ್ನು ಕೂರಿಸುವಂತೆ  ಜಪಾನೀಯರು ಸಹ ಬೊಂಬೆ ಕೂರಿಸಿ ಹಿನ ಮತ್ಸುರಿ ಎಂದು ಆಚರಿಸುತ್ತಾರೆ. ಜಪಾನಿನಲ್ಲಿ ಮತ್ಸುರಿ ಎಂದರೆ ಹಬ್ಬ ಎಂದರ್ಥ.
* ನಮ್ಮ ದೀಪಾವಳಿ ಹಬ್ಬದಂತೆ ಜಪಾನಿನಲ್ಲಿ ಹಾನಬಿ ಎಂಬ ಹಬ್ಬವಿದೆ, ಈ ಹಬ್ಬದಂದು ನಮ್ಮಂತೆಯೇ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ.
* ಪ್ರತಿ ವರ್ಷ ಏಪ್ರಿಲ್ ೮ ರಂದು ಬುದ್ದನ ಜನ್ಮ ದಿನಾಚರಣೆಯನ್ನು ಆಚರಿಸುತ್ತಾರೆ. ಎಲ್ಲಾ ಹಬ್ಬದ ಸಮಯದಲ್ಲೂ ಮಕ್ಕಳಿಂದ ಮುದುಕರವರೆಗೂ ನೃತ್ಯಮಾಡಿ ಸಂಭ್ರಮಿಸುತ್ತಾರೆ.
* ಜಪಾನಿನಲ್ಲು ಕೂಡ ನಮ್ಮಲ್ಲಿರುವಂತೆ ಪೋಷಕರು ತಮ್ಮ ಮಕ್ಕಳಿಗೆ ಸಂಗಾತಿಯನ್ನು ಹುಡುಕಿ ಮಾಡುವೆ ಮಾಡುತ್ತಿದ್ದರು ಎರಡನೇ ಮಹಾ ಯುದ್ದದ ನಂತರ ಪ್ರೀತಿಸಿ ಮದುವೆಯಾಗುವುದು ರೂಡಿಯಲ್ಲಿದೆ. ಮದುವೆಯನ್ನು ಸಂಪ್ರದಾಯದಂತೆ ದೇವಸ್ಥಾನಗಳಲ್ಲಿ ಮಾಡುತ್ತಾರೆ.
 * ಭಾರತೀಯ ಹೆಣ್ಣು ಮಕ್ಕಳಂತೆಯೇ ಜಪಾನಿನ ಹೆಣ್ಣು ಮಕ್ಕಳು ಕುಟುಂಬ ಮತ್ತು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ.
* ಜಪಾನಿನ ಜ್ಯೂಡೋ ಮತ್ತೆ ನಮ್ಮ ಕರಾಟೆ ಕಲೆಗಳು ಒಂದೇ ತರನಾಗಿವೆ.
* ನಾವು ದೇವಸ್ಥಾನದ ಒಳ ಹೋಗುವ ಮುನ್ನ ಕಾಲು ತೊಳೆಯುವಂತೆ ಜಪಾನೀಯರು ಸಹ ಕಾಲು ತೊಳೆಯುತ್ತಾರೆ. ಕಾಲು ತೊಳೆಯಲೆಂದೇ ವಿಶೇಷ ವ್ಯವಸ್ತೆ ಇರುತ್ತದೆ ದೇವಸ್ಥಾನಗಳಲ್ಲಿ ನಮ್ಮಂತೆಯೇ ದೀಪ ಹಚ್ಚಿ ಊದುಬತ್ತಿಯನ್ನು ಬೆಳಗಿಸುತ್ತಾರೆ . ದೇವಸ್ಥಾನದ ಮುಂಭಾಗ ದೊಡ್ಡ ಗಂಟೆಯನ್ನು ಕಟ್ಟಿ ಅದನ್ನು ಬಡಿಯಲೆಂದೇ ದೊಡ್ಡ ಹಗ್ಗವನ್ನು ಕಟ್ಟಿರುತ್ತಾರೆ ಜನರು ಆ ಹಗ್ಗದ ಸಹಾಯದಿಂದ ಗಂಟೆಯನ್ನು ಬಡಿದು ಎರೆಡು ಭಾರಿ ಕೈ ತಟ್ಟಿ ದೇವರಿಗೆ ನಮಸ್ಕರಿಸುತ್ತಾರೆ. ದೇವಸ್ಥಾನದ ಪೂಜಾರಿಗಳು ನಮ್ಮ ಇಲ್ಲಿಯ ಪೂಜಾರಿಗಳಂತೆ ಜುಟ್ಟು ಬಿಟ್ಟಿರುತ್ತಾರೆ.
* ನಮ್ಮಂತೆಯೇ ಪ್ರಕೃತಿಯಾದ ಭಾನು, ಭೂಮಿ, ಜಲ, ಅಗ್ನಿ ಮತ್ತು ಕಾಡನ್ನು ದೇವರೆಂದು ನಂಬುತ್ತಾರೆ.  ವಾರದ ದಿನಗಳ ಹೆಸರುಗಳು ಸಹ ನಮ್ಮಂತೆಯೇ ಇವೆ ಸೋಮವಾರವನ್ನು ಚಂದ್ರನ ಅರ್ಥದಿಂದ, ಮಂಗಳವಾರವನ್ನು ಅಗ್ನಿಯ ಅರ್ಥದಿಂದ, ಬುಧವಾರವನ್ನು ನೀರಿನ ಅರ್ಥದಿಂದ, ಗುರುವಾರವನ್ನು ಮರದ ಅರ್ಥದಿಂದ, ಶುಕ್ರವಾರವನ್ನು ಚಿನ್ನ ಮತ್ತು ದುಡ್ಡಿನ ಅರ್ಥದಿಂದ, ಶನಿವಾರವನ್ನು ಭೂಮಿಯ ಅರ್ಥದಿಂದ, ಭಾನುವಾರವನ್ನು ಸೂರ್ಯನ ಅರ್ಥದಿಂದ ಕರೆಯುತ್ತಾರೆ.
ನಮ್ಮಗಳಂತೆ ಮನೆಯಲ್ಲಿ ಎಲ್ಲರೊಂದಿಗೆ ನೆಲದ ಮೇಲೆ ಕೂತು ಊಟ ಮಾಡುತ್ತಾರೆ ಊಟಕ್ಕೆ ಮುಂಚೆ ದೇವರಲ್ಲಿ  ಪ್ರಾರ್ಥಿಸಿ ರೈತರಿಗೆ ಕೃತಘ್ನತೆ ಅರ್ಪಿಸಿ , ಊಟವಾದ ನಂತರ ಅಡುಗೆ ಮಾಡಿದವರಿಗೆ ಧನ್ಯವಾದ ಅರ್ಪಿಸುತ್ತಾರೆ. ನಮ್ಮಂತೆಯೇ ಅಥಿತಿದೇವೋಭವ ಎನ್ನುವಂತೆ ಅಥಿತಿಗಳನ್ನೂ ದೇವರಂತೆ ನೋಡಿಕೊಳ್ಳುತ್ತಾರೆ .
* ಮನೆಯಿಂದ ಹೊರ ಹೋಗುವಾಗ ಹೋಗಿ ಬರುವೆ ಎಂದು, ಹೊರಗಿನಿಂದ ಬಂದಾಗ ವಾಪಸ್ ಬಂದೆ ಎಂದು ಹೇಳುವುದು ಅವರ ಸಾಮಾನ್ಯ ರೂಢಿಗಳಲ್ಲೊಂದು.
* ಸಾಕು ಪ್ರಾಣಿಗಳೆಂದರೆ ಜಪಾನೀಯರಿಗೆ ಎಲ್ಲಿಲ್ಲದ ಪ್ರೀತಿ, ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ.
* ನಮ್ಮ ಸಮಾಜದಲ್ಲಿ ಜನಗಳು ಮಾಡುವ ಕೆಲಸಕ್ಕನುಗುಣವಾಗಿ ಜಾತಿ ಪಂಗಡಗಳನ್ನು ವಿಂಗಡಿಸಿದಂತೆಯೇ ಜಪಾನಿನಲ್ಲು ಕೂಡ ಕೆಲಸಕ್ಕನುಗುಣವಾಗಿ ಜಾತಿಯನ್ನು ವಿಂಗಡಿಸಲಾಗಿದೆ

                                                                     ಇಂತಿ,
                                                                     ಕವಿತಾ ಗೋಪಿಕುಂಟೆ 

Monday, 30 June 2014

Resume ರೆಡಿನಾ ...?

28/06/2014 ಶನಿವಾರದ ಕನ್ನಡಪ್ರಭ ಪತ್ರಿಕೆಯಲ್ಲಿ ನನ್ನ ಲೇಖನ 
ಎಂಜಿನಿಯರಿಂಗ್ ಪದವಿ ಈಗಷ್ಟೇ ಮುಗಿದಿದೆ. ಲಕ್ಷಾಂತರ ಮಂದಿಯ ನಡುವೆ ಉದ್ಯೋಗ ಬೇಟೆ ಶುರು. ಆದರೆ ನಾವು ಬಯಸಿದ ನೌಕರಿ ಸಿಗದಿದ್ದಾಗ ನಮ್ಮ ಉತ್ಸಾಹಗಳೆಲ್ಲ ಪಾತಾಳಕ್ಕೆ ಇಳಿದಿರುತ್ತದೆ.
ಹೌದು, ಇದಕ್ಕೆಲ್ಲ ಕಾರಣ ಪೂರ್ವ ತಯಾರಿಯ ಕೊರತೆ. ಹೇಳಿ ಕೇಳಿ ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಒಂದು ನೌಕರಿಗೆ ನೂರಾರು ಆಕಾಂಕ್ಷಿಗಳಿರುತ್ತಾರೆ. ಹಾಗಾಗಿ ಬಯಸಿದ ಕೆಲಸ ಸಿಗಬೇಕಾದರೆ ಜಾಣ್ಮೆ, ಒಂದಷ್ಟು ಪೂರ್ವ ತಯಾರಿ ಅತ್ಯಗತ್ಯ. ಅದು ಹೇಗೆ? ಇಲ್ಲಿದೆ ಉತ್ತರ...
1.ಪದವಿಗಾಗಿ ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಆ ವಿಷಯದಲ್ಲಿ ಪರಿಣತಿ ಹೊಂದಿರುವವರ ಬಳಿ ಉದ್ಯೋಗಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿ ಕಲೆಹಾಕಿ.
2.ರೆಸ್ಯೂಮ್ ತಯಾರಿಸಲು ಮತ್ತು ಸಂದರ್ಶನದ ಪೂರ್ವ ತಯಾರಿ ಬಗ್ಗೆ ಪರಿಣತರ ಮಾರ್ಗದರ್ಶನ ತೆಗೆದುಕೊಳ್ಳಿ.
3.ರೆಸ್ಯೂಮನ್ನು ವೃತ್ತಿಗೆ ಸಂಬಂಧಿಸಿದ ಜಾಲತಾಣಗಳಾದ ನೌಕರಿ.ಕಾಂ, ಮಾನ್‌ಸ್ಟರ್.ಕಾಂ ಮುಂತಾದವುಗಳಲ್ಲಿ ನೋಂದಣಿ ಮಾಡಿಕೊಳ್ಳಿ.
4.ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಕನ್ಸಲ್ಟೆನ್ಸಿಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೇಮಕ ಪ್ರಕ್ರಿಯೆ ನಡೆಸುತ್ತವೆ. ಹಾಗಾಗಿ ಪ್ರಸಿದ್ಧ ಕನ್ಸಲ್ಟೆನ್ಸಿಗಳಿಗೆ ರೆಸ್ಯೂಮ್ ಕೊಟ್ಟು ರಿಜಿಸ್ಟರ್ ಮಾಡಿಸಿಕೊಳ್ಳಿ.
5.ಕೆಲಸದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗುವುದರಿಂದ ಅದರ ಮೇಲೊಂದೂ ಕಣ್ಣಿಟ್ಟಿರಿ.
6.ನೀವು ಎಂಜಿನಿಯರಿಂಗ್ ಓದಿದ್ದರೆ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗೆಳೆಯರ ಜತೆ ನಿರಂತರ ಸಂಪರ್ಕದಲ್ಲಿರಿ.

7.ಬಹುತೇಕ ಕೆಲಸಗಳು ರೆಫರೆನ್ಸ್‌ನಿಂದ ಮತ್ತು ಜನ ಸಂಪರ್ಕದಿಂದಲೇ ಸಿಗುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಕಂಪನಿ ಮತ್ತು ನಾವು ಆರಿಸಿಕೊಂಡ ವಿಷಯಗಳಲ್ಲಿ ನುರಿತವರನ್ನು ಪರಿಚಯ ಮಾಡಿಕೊಳ್ಳಿ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಜತೆಗೂ ಸಂಪರ್ಕ ಇಟ್ಟುಕೊಳ್ಳಿ. ಹಿರಿಯ ವಿದ್ಯಾರ್ಥಿಗಳು ತಮ್ಮ ರೆಫರೆನ್ಸ್‌ನಿಂದ ಕೆಲಸ ಗಿಟ್ಟಿಸಿಕೊಟ್ಟ ಉದಾಹರಣೆ ಸಾಕಷ್ಟುಂಟು.
 8.ಇತ್ತೀಚಿನ ದಿನಗಳಲ್ಲಿ ಲಿಂಕ್ಡ್‌ಇನ್ ಉದ್ಯೋಕಾಂಕ್ಷಿಗಳು ಮತ್ತು ಕಂಪನಿಯನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಲಿಂಕ್ಡ್‌ಇನ್‌ನಲ್ಲೂ ಖಾತೆ ತೆರೆಯಿರಿ.
9.ಸಾಮಾನ್ಯವಾಗಿ ಕಂಪನಿಯಲ್ಲಿ ರೆಸ್ಯೂಮ್ ಹಾಕಿದ ದಿನಾಂಕದ ಮೇಲೆ ಮತ್ತು ಡೊಮೇನ್‌ನಲ್ಲಿ ಬರುವ ಮುಖ್ಯವಾದ ಪದಗಳ ಆಧಾರದಲ್ಲಿ ಉದ್ಯೋಗಾಕಾಂಕ್ಷಿಗಳ ರೆಸ್ಯೂಮ್ ಹುಡುಕಲಾಗುತ್ತದೆ. ಆದ್ದರಿಂದ ನಿತ್ಯ ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡುವುದು ಮತ್ತು ಡೊಮೇನ್‌ನಲ್ಲಿ ನುರಿತವರ ಮಾರ್ಗದರ್ಶನದಲ್ಲಿ ರೆಸ್ಯೂಮ್ ತಯಾರಿಸುವುದು ಒಳಿತು.
10.ರೆಸ್ಯೂಮ್ ಸಾಧ್ಯವಾದಷ್ಟು ಚಿಕ್ಕದಾಗಿ ಚೊಕ್ಕವಾಗಿರಲಿ. ಶಾಲಾ ಕಾಲೇಜು ದಿನಗಳಲ್ಲಿ ಮಾಡಿದ ಸಾಧನೆಗಳ ವಿವರವೂ ಅಲ್ಲಿರಲಿ.
11.ನಿಮ್ಮಂತೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ವೃತ್ತಿಪರ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿರುತ್ತಾರೆ. ಹಾಗಾಗಿ ನಿತ್ಯ ಮೇಲ್ ನೋಡಿ. ಕಂಪನಿಯಿಂದೇನಾದರೂ ಮೇಲ್ ಬಂದಿದ್ದರೆ ತಕ್ಷಣ ಪ್ರತ್ಯುತ್ತರ ನೀಡಿ. ಒಂದು ದಿನ ತಡವಾದರೂ ನೀವು ಸ್ಪರ್ಧೆಯಿಂದ ಹಿಂದೆ ಬೀಳುತ್ತೀರಿ ಎನ್ನುವುದು ನೆನಪಿರಲಿ.
12.ಸಂದರ್ಶನಕ್ಕೆ ತೆರಳುವ ಮುನ್ನ ಕಂಪನಿ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡಿರಿ. ಸಂದರ್ಶನಕ್ಕೆ ಫಾರ್ಮಲ್ ಬಟ್ಟೆಗಳನ್ನೇ ಧರಿಸಿ.

Sunday, 19 January 2014

ಕನ್ನಡದಿಂದ ಅನ್ನ [ಕನ್ನಡಿಗರಿಗೆ ಉದ್ಯೋಗ]

ಗೆಳೆಯರೇ ಕನ್ನಡಿಗರಿಗೆ ಉದ್ಯೋಗ ಅನ್ನುವ ಗುಂಪಿದೆ ಹರ್ಷ ಸರ್, ಆನಂದ್ ಸರ್, ರವೀಂದ್ರ ಸರ್ ಮುಂತಾದವರು ಈ ಗುಂಪನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವುದು ಕಷ್ಟಕರವಾಗಿದೆ. ಮತ್ತು ನಮ್ಮ ಕನ್ನಡದ ಬಳಕೆಯನ್ನು ನಿರ್ಲಕ್ಷಿಸಲಾಗಿದೆ ಇದನ್ನೆಲ್ಲಾ ತಡೆಗಟ್ಟುವ ನಿಟ್ಟಿನಲ್ಲಿ ಈ ಗುಂಪು ಕಾರ್ಯ ನಿರ್ವಹಿಸುತ್ತಿದೆ .
ಮೊನ್ನೆ ದಿನ ಶನಿವಾರ ಈ  ಗುಂಪಿನ ಮೀಟಿಂಗ್ ಗೆ ಹೋಗಿದ್ದೆ ಅಲ್ಲಿ ಇದ್ದವರು ಎಲ್ಲಾ ಗೊತ್ತಿರೋ ಮುಖಗಳೇ ಆಗಿದ್ದವು. ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಾವೆಲ್ಲರು ಸೇರಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡೆವು

೧.  ಮಾಹಿತಿ ಸಂಗ್ರಹಣ ಮತ್ತು ಸಂಶೋಧನಾ ತಂಡ
೨. ಅಂತರ್ಜಾಲ ತಾಣ ತಂಡ
೩. ಉದ್ಯಮಶೀಲತೆ ತಂಡ
೪. ಕೌಶಲ್ಯ ಅಭಿವೃಧಿ ತಂಡ

ಎಲ್ಲಾ ತಂಡಗಳು ಕಲೆಹಾಕಿದ ಮಾಹಿತಿ, ಕನ್ನಡಿಗರು ಕೆಲಸ ಪಡೆದುಕೊಳ್ಳುವಲ್ಲಿ ಎದರಿಸುವ ಸಮಸ್ಯೆಗಳು ಮತ್ತು  ಕುಂದು ಕೊರತೆಗಳನ್ನು ಸರಿ ಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದೆವು. ಎಲ್ಲಿ ನಮ್ಮ ಕನ್ನಡದ ಬಳಕೆ ಕಾಣುವುದಿಲ್ಲವೋ ಅಲ್ಲಿ ನಮ್ಮ ಕನ್ನಡದ ಬಳಕೆಯನ್ನು ತರಲು ಏನು ಮಾಡಬೇಕು ಎಂಬುದಾಗಿ  ಚರ್ಚಿಸಿದೆವು.
ನಾವು ಈಗ ಎಚ್ಚೆತ್ತು ಕೊಳ್ಳದಿದ್ದರೆ ನಮ್ಮ ಕನ್ನಡ ಭಾಷೆ ಇತಿಹಾಸ ಸೇರಿಬಿಡುತ್ತದೆ. ಎಲ್ಲರಲ್ಲೂ ಕನ್ನಡದಲ್ಲೇ ವ್ಯವಹರಿಸಿ ಕನ್ನಡದಿಂದ ಅನ್ನ ಎನ್ನುವಂತೆ ಮಾಡೋಣ ಈ ಕಾರ್ಯಕ್ಕೆ  ದಯವಿಟ್ಟು ನೀವೆಲ್ಲರೂ ನಿಮ್ಮ ಕೈ ಜೋಡಿಸಿ ಕನ್ನಡಮ್ಮನ ಸೇವೆಯಲ್ಲಿ ಪಾಲ್ಗೊಳ್ಳಿ

                                                         ।।ಜೈ ಕರ್ನಾಟಕ ಮಾತೆ।।

Tuesday, 23 April 2013

22/04/2013 ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ಲೇಖನ "ಮುಪ್ಪು ಒಪ್ಪು"



ಮುದ್ದಿಸಿದ ಪೋಷಕರು ಮುಪ್ಪಾದರೂ ಬೇಕು ..!

ನಡೆದಾಡುವ ದೇವರುಗಳೆಂದರೆ ಅದು ಅಪ್ಪ ಅಮ್ಮ ಮಾತ್ರ. ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲದೇ ತಂದೆ ತಾಯಿಯನ್ನು ಸೃಷ್ಟಿಸಿದನಂತೆ. ಕೂಸು ಕಣ್ಣು ಬಿಡುವ ಮುನ್ನವೇ ಸಾವಿರಾರು ಕನಸು ಕಟ್ಟಿ ತನ್ನ ಮಕ್ಕಳಿಗೆ ಪ್ರಪಂಚದ ಎಲ್ಲಾ ಸುಖ ಸವಲತ್ತು ಕಲ್ಪಿಸಬೇಕೆಂದು ಜವಾಬ್ದಾರಿಗಳ ಸರಮಾಲೆಗೆ ಹೆಗಲು ಕೊಟ್ಟ ತಂದೆ,  ನವ ಮಾಸ ತನ್ನೊಳಗೆ ಅವಿತಿಟ್ಟು ಎಲ್ಲ ನೋವ ಸಹಿಸಿ ತಮ್ಮೆಲ್ಲಾ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ತನ್ನ ಒಡಲಕುಡಿಯನ್ನು ಭೂಮಿಗೆ ತರುವ ತಾಯಿ, ಈ ಎರಡು ಜೀವಗಳನ್ನು ಬಣ್ಣಿಸಲು ಪದಗಳೇ ಸಾಲದು.

ತಮ್ಮೆಲ್ಲಾ  ಆಸೆ ಬದಿಗಿಟ್ಟು ಕಷ್ಟಗಳ ನುಂಗಿ ಮಕ್ಕಳಿಗೆ ಬೇಕ್ಕಾದ್ದನ್ನೆಲ್ಲಾ ಕಲ್ಪಿಸಿ, ತಾವು ಉಪವಾಸವಿದ್ದರೂ ಮಕ್ಕಳಿಗೆ ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಿಸುವ ಮಾತಾಪಿತೃಗಳು, ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಅವರಿಗೆ ಅವರ ಬಾಲ್ಯದಲ್ಲಿ ಸಿಗದ ಎಲ್ಲವನ್ನೂ ಮಕ್ಕಳಿಗೆ ಮಾಡುತ್ತಾರೆ. ನಾವು ಸಾಧಿಸಲಾಗದ್ದನ್ನು ನಮ್ಮ ಮಕ್ಕಳಾದರೂ ಸಾಧಿಸಲಿ ಎಂದು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ.  ತಮ್ಮ ಆರ್ಥಿಕ ಮಿತಿ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ  ತುಡಿತದಲ್ಲಿ ಸಾಲಸೋಲ ಮಾಡಿಯಾದರೂ ಉತ್ತಮ, ಉನ್ನತ ಶಿಕ್ಷಣವನ್ನೇ ಕೊಡಿಸುತ್ತಾರೆ. ಇಷ್ಟೆಲ್ಲಾ ಮಕ್ಕಳಿಗಾಗಿಯೇ ಜೀವ ತೇಯುವ ತಂದೆ ತಾಯಿಯೇ ತಮ್ಮ ಮುಪ್ಪಿನ ಕಾಲದಲ್ಲಿ ಮಾತ್ರ ನಮ್ಮ ಮಕ್ಕಳು ಆಸರೆಯಾಗಬೇಕೆಂಬ  ಸಣ್ಣ ಆಸೆಯೂ ಇಂದಿನ ಮಕ್ಕಳಿಂದ ಈಡೇರುತ್ತಿಲ್ಲವೆಂಬ ಕೊರಗು ಎಲ್ಲ ತಂದೆ ತಾಯಿಗಳಲ್ಲಿದೆ.

ತಂದೆ ತಾಯಿಯರಿಬ್ಬರೇ ಐದಾರು ಮಕ್ಕಳನ್ನು ಸಾಕಿ ಸಲಹಿದರೂ ಕೊನೆಗಾಲದಲ್ಲಿ ಮಾತ್ರ ಅದೇ ಐದಾರು ಮಕ್ಕಳಿಂದ ತಂದೆ ತಾಯಿಗಳನ್ನು ಸಾಕಲು ಹೆಣಗಾಡುತ್ತಾರೆ ಎಂಬುದು ಸುಳ್ಳೇನಲ್ಲ. ಎಲ್ಲ ಮಕ್ಕಳು ಅದೇ ರೀತಿ ಎಂದಲ್ಲವಾದರೂ ಬಹುತೇಕ ಮಕ್ಕಳು ತಾವು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನು ನಿರ್ಲಕ್ಷಿಸುತ್ತಿರುವುದು ಅಷ್ಟೇ ಸತ್ಯ.
ತಮ್ಮ ಜೀವಿತಾವಧಿಯ ಕೊನೆ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಂದ ಬಯಸುವುದು ಕೇವಲ ಪ್ರೀತಿ,ಮಮತೆ ಒಂದೆರಡೊತ್ತಿನ ಊಟ ಮಾತ್ರವೇ. ಅಷ್ಟನ್ನು ಕೊಟ್ಟರೆ ಸಾಕು ನಮ್ಮ ಹಿರಿ ಜೀವಗಳು ನೆಮ್ಮದಿಯಿಂದ ಕಾಲ ಕಳೆಯುತ್ತವೆ.

ಇಷ್ಟು ಮಾಡಿ ಸಾಕು...
ಪೋಷಕರನ್ನು ಖುಷಿಯಿಂದಿರಿಸಲು ತೀರಾ ಶ್ರಮಪಡಬೇಕಿಲ್ಲ. ನಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆ ಕೆಲ ಮಾರ್ಪಾಡು ಮಾಡಿಕೊಂಡರೆ ಸಾಕು.
     
·         ಹಿರಿಯ ಜೀವಗಳಿಗೆ ಮಕ್ಕಳಿಂದ ಬೇಕಿರುವುದು ಆಸ್ತಿ ಅಂತಸ್ತಲ್ಲ ಕೇವಲ ಪ್ರೀತಿ ಮಾತ್ರ, ಹಾಗಾಗಿ ಸಾಧ್ಯವಾದಾಗಲೆಲ್ಲಾ ಪೋಷಕರ ಜತೆ ಪ್ರೀತಿಯಿಂದ ಮಾತನಾಡಿ.

·         ಪೋಷಕರ ಮಾತುಗಳಿಗೆ ಸಾಧ್ಯವಾದಷ್ಟು ಕಿವಿ ಕೊಡಿ. ಅವರ ಸಮಸ್ಯೆ ಬಗೆ ಹರಿಸದಿದ್ದರೂ ಪರವಾಗಿಲ್ಲ ಸುಮ್ಮನೆ ಅವರ ಪಕ್ಕ ಕುಳಿತು ಕೇಳಿಸಿಕೊಳ್ಳಿ.

·         ಸದಾ ಎಲ್ಲ ವಿಷಯಗಳಿಗೂ ಮಕ್ಕಳು ನಮ್ಮದೊಂದು ಮಾತು ಕೇಳಲಿ ಎಂಬಾಸೆ ಎಲ್ಲ ಪೋಷಕರದ್ದು. ಹಾಗಾಗಿ ನೀವು ಏನೇ ಮಾಡುವುದಿದ್ದರೂ ಒಂದು ಮಾತು ಅವರ ಗಮನಕ್ಕೆ ತನ್ನಿ. ಇದರಿಂದ ನಿಮಗೇನೂ ನಷ್ಟವಿಲ್ಲ ಆದರೆ ಪೋಷಕರಿಗೆ ಖುಷಿಯಾಗುತ್ತದೆ.

·         ನಿಮ್ಮ ಪೋಷಕರು ಈಗೀಗ ನಿಮಗೆ ಹೊರೆಯಾಗುತ್ತಾರೆ ಎಂದೆನಿಸಿ, ವೃದ್ದಾಶ್ರಮ ಅಥವಾ ಬೇರೆ ಮನೆಗೆ ಕಳುಹಿಸುವ ಮುನ್ನ ಆಲೋಚಿಸಿ, ಮುಂದ್ದೊಂದು ದಿನ ನಿಮಗೂ ವಯಸ್ಸಾಗುತ್ತದೆ ಆಗ ನಿಮ್ಮ ಮಕ್ಕಳು ಹಾಗೆಯೇ ಯೋಚಿಸುತ್ತಾರೆ.

·         ಕಾಲ ಬದಲಾದರೂ ಅದಕ್ಕೆ ತಕ್ಕಂತೆ ಪೋಷಕರು ಬಹು ಬೇಗ ಬದಲಾಗರು. ಹಾಗಾಗಿ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಹಳೆಪದ್ದತಿ ಹಳೆಜನ ಎಂದು ಹೀಗೆಳೆಯಬೇಡಿ.

·         ನಿಮಗಾಗಿ ಜೀವವನ್ನೇ ಸವೆಸಿದವರು ಅವರು, ಹಾಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ ನೀವು ಚಿಕ್ಕವರಾಗಿದ್ದಾಗ ಕೇಳುವ ಮೊದಲೇ ನಿಮ್ಮಾಸೆಗಳನ್ನು ಈಡೇರಿಸಿದವರು ಅವರು ಎಂಬುದು ನೆನಪಿರಲಿ.

·         ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನೀವು ಮಾಡಿದ್ದನ್ನೇ ನಿಮ್ಮ ಮಕ್ಕಳು ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕ್ಕೊಂಡು ನಿಮ್ಮ ಪೋಷಕರೊಂದಿಗೆ ಪ್ರೀತಿ,ಸಹನೆ ಮಮತೆಯಿಂದ ವರ್ತಿಸಿ.
 
                                                ಇಂತಿ,
                                                        ಕವಿತಾಗೌಡ