Thursday, 7 March 2013

ಹೆಣ್ಣೆಂದರೆ ಎಷ್ಟು ಚಂದ ಅಲ್ಲವೇ...



ಹೆಣ್ಣು ಎಂಬ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸಿಗೆ ಎಷ್ಟು ಉಲ್ಲಾಸವಾಗುತ್ತದೆ ಅಲ್ಲವೇ. ಹೆಣ್ಣು ಜಗತ್ತಿನ ಸೃಷ್ಟಿಯ ಮೂಲ.
ಈ ಭೂತಾಯಿ ಹೆಣ್ಣು, ಭಾರತಾಂಬೆ ಹೆಣ್ಣು, ಕನ್ನಡಾಂಬೆ ಹೆಣ್ಣು, ಸಕಲ ಜೀವ ಚರಾಚರಗಳ ಕಾಯುವ ದೇವಿಮಾತೆ ಹೆಣ್ಣು. ನಮ್ಮ ಮನೆ ಮಗಳು ಹೆಣ್ಣು, ಮನೆ ಬೆಳಗೊ ನಂದಾದೀಪ ಹೆಣ್ಣು, ಮನೆಯ ಆಧಾರ ಸ್ತಂಭ ತಾಯಿ ಹೆಣ್ಣು.

ಸಹನಾಮಯಿ, ಕರುಣಾಮಯಿ, ತ್ಯಾಗಮಯಿ ಹೀಗೆ ಹೆಣ್ಣಿಗೆ ನಾನಾ ಬಿರುದುಗಳಿವೆ. ಈ ಎಲ್ಲಾ ಬಿರುದುಗಳಿಗೆ ಕಾರಣ ಅವಳ ನಡೆನುಡಿ, ಆವಾಭಾವ, ಬೇರೆಯವರನ್ನ ಉದ್ದರಿಸುವ, ಸತ್ಕರಿಸುವ ಮನಸ್ಸಿನಿಂದಾಗಿ.

ಹೆಣ್ಣನ್ನು ಹೊಗಳದ ಲೇಖಕನಿಲ್ಲ, ಹೆಣ್ಣನ್ನು ಬಣ್ಣಿಸದ ಕವಿಯಿಲ್ಲ, ಹೆಣ್ಣನ್ನು ವರ್ಣಿಸದ ಪದಗಳಿಲ್ಲ.

ಹೆಣ್ಣು ರೂಪವತಿ, ಜಗದ ಸೌಂದರ್ಯವನೆಲ್ಲ ತನ್ನ ಸೆರಗಿನಲ್ಲೆ ಕಟ್ಟಿಕೊಂಡಿರುವ ಸೌಂದರ್ಯವತಿ, ಧೈರ್ಯವಂತೆ, ಬುದ್ದಿವಂತೆ ಹಾಗೆ ಜಾಣೆ ಕೂಡ.

ಇಂತಹ ಹೆಣ್ಣು ಹುಟ್ಟಿದಾಗಿನಿಂದ ಸಾಯುವವರೆಗೆ ತನ್ನ ನಾನಾ ಜವಬ್ದಾರಿಗಳನ್ನ ಹೆಗಲ ಮೇಲೆ ಹೊತ್ತು, ಕಾಲಕಾಲಕ್ಕೆ ತನ್ನನ್ನು ತಾನು ಬದಲಾಯಿಸಿಕೊಂಡು, ತನ್ನಿಂದ ಆಗಬಹುದಾದಂತಹ ಎಲ್ಲಾ ಕೊಡುಗೆಗಳನ್ನು ತನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ನೀಡುತ್ತಾ ಬಂದಿದ್ದಾಳೆ.


ಮಗಳಾಗಿ ಅಪ್ಪ ಅಮ್ಮನ ಮುದ್ದಿನ ಕೂಸಾಗಿ, ಜಗದ ಎಲ್ಲಾ ಸುಖವನ್ನು ತಂದುಕೊಟ್ಟು ಬೆಟ್ಟದಷ್ಟು ಕನಸುಗಳನ್ನು ಕಟ್ಟಿಕೊಡುತ್ತಾಳೆ. ಹುಟ್ಟಿದಾಕ್ಷಣ  ಜವಾಬ್ದಾರಿಗಳ ಸರಮಾಲೆಯನ್ನೇ ತಂದು ಹಾಕುತ್ತಾಳೆ.

ಒಬ್ಬ ಗಂಡನಾದವನು ಹೆಂಡತಿಯಿಂದ ಕಲಿಯದ್ದನ್ನು, ತನ್ನ ತಾಯಿಯಿಂದ ಕಲಿಯಲಾಗದ್ದನ್ನು ತನ್ನ ಮಗಳಿಂದ ಕಲಿಯುತ್ತಾನೆ. ಗಂಡಿನ ಜೀವನ ಸಾರ್ಥಕವಾಗುವುದು ಅವನು ಅಪ್ಪನಾದಮೇಲೆ ಮಾತ್ರ.

ಮಗು ಅಪ್ಪನೆಡೆಗೆ ದೃಷ್ಟಿ ನೆಟ್ಟು  ನೀನೇ ನನ್ನ ಜನುಮದಾತ ಅನ್ನುವ ಭಾವದಿ ನೋಡುವಾಗ ತಂದೆಯಾದವನಿಗೆ ಎಲ್ಲಿಲ್ಲದ ಖುಷಿ ತಂದು, ಮೇಲಿರುವ ಸ್ವರ್ಗ ಕಣ್ಣಮುಂದೆ ಬಂದಂತೆ ಮಾಡುತ್ತಾಳೆ.

ತೊದಲು ನುಡಿಯುವಾಗ, ಅಂಬೆಗಾಲಿಡುವಾಗ ಅಪ್ಪನ ಅಣಕಿಸಿ ಹುಸಿ ಕೋಪ ತೋರುವಾಗ ತನ್ನ ತಂದೆಯ ಜೀವನವನ್ನ ಸಾರ್ಥಕತೆಯ ಕಡೆಗೆ ಕದ್ದೊಯ್ಯುತ್ತಾಳೆ.


ತಂಗಿಯಾಗಿ ಅಣ್ಣನ ಗೋಳಾಡಿಸುತ್ತಾಳೆ, ಪೀಡಿಸುತ್ತಾಳೆ. ಅವನ ಆಟ ಪಾಠಗಳಲ್ಲಿ ಜೊತೆಯಾಗುತ್ತಾಳೆ.
ಜಗಳವಾಡುವಾಗ ಪರಚಿ ಕಚ್ಚಿ ಗಾಯವಾಗಿಸಿ ಬಾಲ್ಯದ ಸವಿ ಸವಿ ನೆನಪುಗಳನ್ನು ಅಣ್ಣನಿಗೆ ಉಡುಗೊರೆಯಾಗಿ ನೀಡುತ್ತಾಳೆ. ಒಂದು ಹಂತಕ್ಕೆ ಬಂದಾಗ ಅಣ್ಣನಿಗೂ ಕೂಡ ಅಪ್ಪನಿಗೆ ಕೊಟ್ಟಂತಹ ಜವಾಬ್ದಾರಿಗಳನ್ನು ಹೆಗಲೇರಿಸುತ್ತಾಳೆ.
ಮುಂದ್ದೊಂದು ದಿನ ಮದುವೆಯಾಗಿ ಗಂಡನ ಮುದ್ದು ಮಡದಿಯಾಗಿ, ಅವನ ಬೆನ್ನೆಲುಬಾಗಿ ನಿಲ್ಲುತ್ತಾಳೆ.
ಅವನ ಎಲ್ಲಾ ಜವಾಬ್ದಾರಿಗಳನ್ನ ಇವಳೇ ವಹಿಸಿಕೊಂಡು ಅವನ ಹಿಂದೆ ನಿಂತು ಅವನ ಎಲ್ಲಾ ಸಾಧನೆಗಳಿಗೆ ಸ್ಪೂರ್ತಿಯಾಗುತ್ತಾಳೆ.

ಸೊಸೆಯಾಗಿ ಅತ್ತೆ ಮಾವಂದಿರ ಮುದ್ದು ಮಗಳಾಗಿ, ನಾದಿನಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನೋವನ್ನು ಮರೆಸುತ್ತಾಳೆ.

ಅತ್ತಿಗೆ ತಾಯಿ ಸಮಾನ ಎನ್ನುವಂತೆ ಮೈದುನರಿಗೆ ತಾಯಿಯಾಗಿ ಅಮ್ಮನ ಮನೆಗೂ ಅತ್ತೆಯ ಮನೆಗೂ ಕಲಶವಾಗುತ್ತಾಳೆ.

ತಾಯಿಯಾಗಿ ತನ್ನ ಎಲ್ಲ ನೋವನ್ನು ನುಂಗಿ ಮಗುವೆಂಬ ಮತ್ತೊಂದು ಜೀವವನ್ನು ಭೂಮಿಗೆ ತರುತ್ತಾಳೆ.
ಕರುಳ ಕುಡಿಗೆ ಸ್ವಲ್ಪವು ಕೊರತೆ ಬರದಂತೆ ನೋಡಿಕೊಳ್ಳುತ್ತಾಳೆ.ರಕ್ಷಣೆಯಾಗಿ ನಿಲ್ಲುತ್ತಾಳೆ.
ಶಿಕ್ಷಕಿಯಾಗಿ, ಒಳ್ಳೆಯ ಗೆಳತಿಯಾಗಿ ಜೀವನದ ತಾಯಿತನವನ್ನು ಆನಂದಿಸುತ್ತಾಳೆ.

ಮಾಗಿ ಮುಪ್ಪಾವರಿಸಿ ಅಜ್ಜಿಯಾದಾಗ ಮನೆಯ ಹಿರಿಜೀವವಾಗಿ ಕುಟುಂಬದ ಎಲ್ಲರ ಬಗ್ಗೆಯೂ ಚಿಂತಿಸುತ್ತಾ, ಕೈಲಾದ ಕೆಲಸ ಮಾಡುತ್ತಾಳೆ. ಮೊಮ್ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರ ಆಟ ಪಾಠಗಳಲ್ಲೂ ಭಾಗಿಯಾಗುತ್ತಾಳೆ. ಮನೆಯ ಎಲ್ಲಾ ಹಾಗು ಹೋಗುಗಳನ್ನು ತನ್ನ ಅನುಭವದ ಅನಿಸಿಕೆಯಿಂದ ಬಗೆ ಹರಿಸುತ್ತಾಳೆ.

ಹೀಗೆ ಜೀವನದ ಪ್ರತಿಯೊಂದು ಮಜಲುಗಳಲ್ಲೂ ಸದಾ ಸೇವೆ ಮಾಡುತ್ತಾ ತನ್ನ ಗುರಿ ಕಡೆಗೂ ನುಗ್ಗುತ್ತಾ ಸಾರ್ಥಕತೆಯ ಕಡೆಗೆ ಪಯಣಿಸುವ ಹೆಣ್ಣಿನ ಜೀವನ ಎಷ್ಟೊಂದು ಸುಂದರ ಅಲ್ಲವೇ ... ಹೆಣ್ಣೆಂದರೆ ಎಷ್ಟು ಚಂದ ಅಲ್ಲವೇ


                                   ಇಂತಿ,
                                           ಕವಿತಾಗೌಡ
 


Wednesday, 27 February 2013

ಭಾಷಾ ರಾಜಕೀಯವೆಂಬ ಬಿಸಿಯ ಬೇಗೆಯಲ್ಲಿ

ನಮ್ಮ ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಎಂದರೆ ಎಲ್ಲರ ಕಿವಿ ಚುರುಕಾಗುತ್ತವೆ. ಚುನಾವಣೆ ಹತ್ತಿರವಾಗುವ ಸಾದ್ಯತೆಗಳಿವೆ.ಯಾರ ಯಾರ ಸಾಧನೆ ಎಷ್ಟು ಎಂದು ಜನರು ತಮ್ಮ ಎರಡೂ ಕಣ್ಣುಗಳಿಂದ ನೋಡಿ ಪಾವನರಾಗಿದ್ದಾರೆ. ಮುಂದೆ ಜನರ ಒಲವು ಯಾರಿಗೆ ಎಂಬ ಕುತೂಹಲ ಇದ್ದೇ ಇದೆ. ಈ ಎಲ್ಲಾ ಸಂಗತಿಗಳ ನಡುವೆ ಮುಖ್ಯವಾಗಿ ಎದ್ದು ಕಾಣುವುದು ಜಾತಿ ರಾಜಕೀಯ. ಇವತ್ತಿನ ನಮ್ಮ ರಾಜ್ಯದ ರಾಜಕೀಯ ಅಸ್ಥಿತ್ವದಲ್ಲಿರುವುದು ಜಾತಿ ಆಧಾರದ ಮೇಲೆ.
ರಾಜ್ಯ ರಾಜಕಾರಣದಲ್ಲಿ ಜಾತಿ ರಾಜಕಾರಣ ಹೇಗೆ ತಾಂಡವಾಡುತ್ತಿದೆಯೋ ಅದೇ ರೀತಿ ಉದ್ಯೋಗ ಪಥದಲ್ಲಿ ಭಾಷಾ ರಾಜಕೀಯ ತಾಂಡವಾಡುತ್ತಿದೆ.ಇವತ್ತಿನ ದಿನ ಒಬ್ಬ ಪದವೀಧರನಿಗೆ ಲಭಿಸುವ ಉದ್ಯೋಗ ಅವನ   ಸಾಮರ್ಥ್ಯದ ಮೇಲಾಗಲಿ, ಅವನ ಜಾಣ್ಮೆಅಥವಾ ಅವನ ಚಾಕಾಚಕ್ಯತೆ ಮೇಲೆ ನಿರ್ಧಾರವಾಗುತ್ತಿಲ್ಲ ಭಾಷೆಯ ಮೇಲೆ ನಿರ್ಧಾರವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಯಾ ಭಾಷಾ ಜನರ ಒಗ್ಗಟ್ಟು. ಇಲ್ಲಿ ಒಬ್ಬ ಇಬ್ಬರ ಶ್ರಮ  ಎದ್ದು  ಕಾಣುವುದಿಲ್ಲ. ಆ ಭಾಷಾ ಜನಾಂಗದ ಶ್ರಮ ಮತ್ತು ಒಗ್ಗಟ್ಟು ಎದ್ದು ಕಾಣುತ್ತದೆ.
ನಾವಿಂದು ಎಲ್ಲಾ ಭಾಷಾ ಜನಾಂಗದ ನಡುವೆ ತಾರತಮ್ಯದ ಬೇಗೆಯಲ್ಲಿ ಬೇಯುತ್ತಿದ್ದೇವೆ. ಎಲ್ಲರ ಹಾವಳಿಯಿಂದಾಗಿ ನಾವಿಂದು ಮೂಲೆಗುಂಪಾಗಿದ್ದೇವೆ. ಸಾಕಷ್ಟು ತುಳಿತಕ್ಕೆ ಒಳಗಾಗಿದ್ದೇವೆ. ಈ ಭಾಷಾ ರಾಜಕೀಯ ಅಂತರಸಾಕ್ಷಿಯನ್ನು ಮರೆತು, ಮಾನವೀಯ ಮೌಲ್ಯಗಳನ್ನು ತೊರೆದು ಒಂದು ಪಿಡುಗಿನ ರೀತಿ ಹರಡಿದೆ. ಈ ಪಿಡುಗಿಗೆ ಎಷ್ಟೋ ಜನ ಪ್ರತಿಭಾವಂತರು ತುತ್ತಾಗಿದ್ದಾರೆ. ಅರ್ಹತೆ ಇದ್ದರೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿದ್ದಾರೆ. ಅಪ್ಪ ಅಮ್ಮ ಸಾಲ ಮಾಡಿ, ಬಿತ್ತುವ ಹೊಲವನ್ನು ಮಾರಿ, ಕೊನೆಗೆ ತಾಯಿಯ ಮೈಮೇಲಿನ ಒಡವೆಗಳನ್ನು ಮಾರಿ ಮಕ್ಕಳನ್ನು ಓದಿಸಿರುತ್ತಾರೆ ಕೊನೆಗೆ ಕೆಲಸ ಸಿಗದೆ, ಮಳೆ ಬಾರದಿರುವಾಗ, ಬರಗಾಲದಲ್ಲಿ ಕೆಂಗೆಟ್ಟು ಮಳೆಗಾಗಿ ಆಕಾಶ ನೋಡುವ ರೀತಿ ಅಪ್ಪ ಅಮ್ಮ ಮಕ್ಕಳನ್ನು ನೋಡುತ್ತಿರುತ್ತಾರೆ. ಮಕ್ಕಳಾದ ನಾವುಗಳು ಏನೂ ಮಾಡಲಾಗದೆ, ನೋವು ತಡೆಯಲಾಗದೆ, ಯಾರಿಗೂ ಹೇಳಲಾಗದೆ ನಮ್ಮೊಳಗೆ ನಾವೇ ಸಾಯಬೇಕಾಗುತ್ತದೆ.
ಇವತ್ತಿನ ದಿನ ರೈತ ಮಳೆ ಬೆಳೆ ಇಲ್ಲದೆ ಸಾಲ ತೀರಿಸಲಾಗದೆ ಹೇಗೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೋ ಅದೇ ರೀತಿ ಮುಂದಿನ ದಿನಗಳಲ್ಲಿ ಪಧವೀದರರು ಓದುವುದಕ್ಕಾಗಿ ಮಾಡಿರುವ ಸಾಲವನ್ನು ತೀರಿಸಲಾಗದೆ ಸಾವಿನ ದಾರಿ ಹಿಡಿಯುವುದನ್ನು ಕಣ್ಣಮುಂದೆ ನೋಡಬೇಕಾಗುತ್ತದೆ.
ಎಲ್ಲವನ್ನು ಕಣ್ಣ ಮುಂದೆ ನೋಡುತ್ತಿದ್ದರೂ ಅಸಹಾಯಕರಾಗಿ ನಿಂತಿದ್ದೇವೆ ನಾವಿಂದು. ಈ ಕೆಟ್ಟ      ಪರಿಸ್ಥಿತಿಯಲ್ಲಿ ಬೂದಿ ಮಾತ್ರ ಬಲ್ಲದು ಬಿಸಿಯ ಬೇಗೆಯನು ಅನ್ನುವ ಹಾಗೆ ಎಲ್ಲಾ ಗೊತ್ತಿದ್ದರೂ ಇಷ್ಟು ಅನುಭವಿಸುತ್ತಿದ್ದರೂ ಯಾಕಿಷ್ಟು ಸಹನೆ ..?
ಇವತ್ತು ಸಹನೆಯಿಂದ ಸಹಿಸಿಕೊಂಡು ಕೈ ಚೆಲ್ಲಿ ಕೂತರೆ, ನಾಳೆ ನಮ್ಮ ಮುಂದಿನ ಪೀಳಿಗೆ ಕೆಲಸಕ್ಕಾಗಿ ಅರ್ಹತೆ ಇದ್ದರೂ ಭಿಕ್ಷೆ ಬೇಡುವ ರೀತಿಯಲ್ಲಿ ಕೈ ಚಾಚಿ ನಿಲ್ಲಬೇಕಾಗುತ್ತದೆ. ಅವರು ಹಾಕಿದ ಎಂಜಲನ್ನು ಮೃಷ್ಟಾನ್ನ ಅಂದುಕೊಂಡು ತಿನ್ನಬೇಕಾಗುತ್ತದೆ.
ಸಹನಾಮಯಿಗಳಾಗಿರಿ, ಎಲ್ಲರನ್ನೂ ಪ್ರೀತಿಯಿಂದ ಅಕ್ಕರೆಯಿಂದ ಕಾಣಿರಿ ಆದರೆ ನಮ್ಮನ್ನು ನಾವು ಹಾಳುಮಾಡಿಕೊಂಡು ಸಹನೆ ಪ್ರೀತಿ ತೋರಿಸುವುದು ಬೇಡ. ಇವತ್ತು ಇಷ್ಟೆಲ್ಲಾ ನಮ್ಮ ಮೇಲೆ ನಮ್ಮ ನೆಲ ಜಲದ ಮೇಲೆ ಹಾವಳಿಯಾಗುತ್ತಿರುವುದಕ್ಕೆ ಕಾರಣ ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು, ನಾವು ಭಲ ಪ್ರದರ್ಶನದಲ್ಲಿ   ವಿಫಲರಾಗಿರುವುದು.
ಒಗ್ಗಟ್ಟಿನಲ್ಲಿ ಭಲವಿದೆ. ಏಳಿ ಎದ್ದೇಳಿ ಗುರಿ ತಲುಪುವ ತನಕ ನಿಲ್ಲದಿರಿ ಅನ್ನುವ ಹಾಗೆ ನಾವು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣ. ಇದಕ್ಕೆಲ್ಲಾ ನಾವು ಮಾಡಬೇಕಿರುವುದು ಇಷ್ಟೇ, ನಮ್ಮಲ್ಲಿರುವ ಪ್ರತಿಯೊಬ್ಬರೂ ನಮ್ಮವರಿಗಾಗಿ ನಮ್ಮವರ ಏಳಿಗೆಗಾಗಿ ಕೈಲಾದಷ್ಟು ಸಹಾಯ ಮಾಡುವುದು, ನಾವು ನಮ್ಮದು ಅನ್ನುವ ಕಿಚ್ಚನ್ನು ಸದಾ ಎದೆಯಲ್ಲಿ ಇಟ್ಟುಕೊಳ್ಳುವುದು 

                                  ||ಜೈ ಹಿಂದ್ ಜೈ ಕರ್ನಾಟಕ ಮಾತೆ.||

                                            ಇಂತಿ,
                                                   ಕವಿತಾ ಗೌಡ