Thursday, 21 June 2018

ಮಾರತ್ತಳ್ಳಿ ಬ್ರಿಡ್ಜ್

ವಾರದ ಹಿಂದೆಯಷ್ಟೇ ಗೋಪಿಕ ಹೊಸ ಆಫೀಸಿಗೆ ಸೇರಿಕೊಂಡಾಗಿತ್ತು ಹೊಸ ಜಾಗ ಹೊಸ ಜನ ಎಲ್ಲವೂ ಹೊಸತು. ಸೆಕ್ಯೂರಿಟಿಯಿಂದ ಕ್ಯಾಂಟೀನ್ ಅಣ್ಣನವರೆಗೂ ಎಲ್ಲರನ್ನೂ ನಗು ನಗುತ್ತಾ ಮಾತಾಡಿಸುವ ಗೋಪಿಕ ಹಳೆ ಆಫೀಸಿನ ಗುಂಗಿನಿಂದ ಇನ್ನು ಹೊರ ಬಂದಿರಲಿಲ್ಲ. ಅವಳಿಗೆ ಹಳೆ ಆಫೀಸಿನ ಸ್ನೇಹಿತರು ಮತ್ತವರ ನೆನಪು ಕಾಡುತ್ತಲೇ ಇತ್ತು. ಹತ್ತಂತಸ್ತಿನ ಕಟ್ಟಡದಲ್ಲಿ ಗೆಳತಿಯರ ಜೊತೆ ಹಿಂಡುಹಿಂಡಾಗಿ ತಿರುಗುತ್ತಿದ್ದ ಅವಳಿಗೆ ಒಂದೇ ಫ್ಲೋರ್ ನಲ್ಲಿದ್ದ ಹೊಸ ಆಫೀಸ್ ಅಷ್ಟೇನು ರುಚಿಸಿರಲಿಲ್ಲ. ಸೀಟಿನಲ್ಲಿ ಕೂತಿದ್ದರೂ ಕ್ಯಾಂಟೀನಿಗೆ ಹೋದರೂ ಕಾಲಿಗೆ ಏನೋ ತಡವರಿಸುವ ಭಾವವೊಂದು ಕಾಡುತ್ತಿತ್ತು.
ಗೋಪಿಕಳ ಆಫೀಸ್ ಇದ್ದದ್ದು ಎಚ್ ಏ ಎಲ್ ಕಡೆಗೆ ಆದ್ದರಿಂದ ದಿನವೂ ಆಫೀಸ್ಗೆ ಹೋಗುವಾಗ ಬರುವಾಗ ಮಾರತ್ತಳ್ಳಿ ಬ್ರಿಡ್ಜ್ ನಲ್ಲಿ ಇಳಿದು ಬೇರೆ ಬಸ್ ಹಿಡಿದು ಪ್ರಯಾಣಿಸಬೇಕಿತ್ತು. ರುಚಿಸದ ಆಫೀಸ್, ಅಷ್ಟೇನೂ ಗೊತ್ತಿರದ ಸಹೋದ್ಯೋಗಿಗಳ ಮಧ್ಯೆ ಕುಳಿತು ಕೆಲಸ ಮಾಡಿ ದಿನದೂಡುವುದೇ ಅವಳಿಗೊಂದು ಸಾಹಸವಾಗಿತ್ತು.
ಹೀಗಿರುವಾಗ ಒಂದು ದಿನ ಮಣಿ ಪೋಣಿಸುವ ರೀತಿ ಒಂದರ ಹಿಂದೊಂದು ಮೀಟಿಂಗ್ ಅಟೆಂಡ್ ಮಾಡಿ ಒಂದು ಕಪ್ಪು ಚಹಾ ಸಹ ಕುಡಿಯದೆ ಮನೆಗೆ ಹೊರಟಳು.  ಮಾರತ್ತಳ್ಳಿ ಬ್ರಿಡ್ಜ್ ನಲ್ಲಿ ಬಸ್ ಇಳಿದಾಗ ಚಹಾದ ನೆನಪಾಗಿ ಅಲ್ಲೇ ಇದ್ದ ಒಂದು ಪುಟ್ಟ ಹೋಟೆಲ್ಲಿಗೆ ನುಗ್ಗಿ ಚಹಾ ಕೊಂಡು ಆಚೆ ಬಂದು ನಿಂತು ಚಹಾ ಹೀರುತ್ತಾ ಸುತ್ತ ಮುತ್ತ ಗಮನಿಸುತ್ತಾ ನಿಂತಳು. 
ಮಾರತ್ತಳ್ಳಿ ಬ್ರಿಡ್ಜ್ ತುಂಬಾ ಸ್ಥಳಗಳಿಗೆ ಕನೆಕ್ಷನ್ ಕೊಡುವ ಜಾಗವಾದ್ದರಿಂದ ತನ್ನ ಎರೆಡು ಕೈಕಾಲುಗಳನ್ನು ಚಾಚಿ ಭುವಿಯನ್ನು ಅಪ್ಪಿ ಮಲಗಿದಂತಿತ್ತು.  ಬಸ್ ಸ್ಟಾಪ್ ಗಳಲ್ಲಿ ಜನಗಳೇ ತುಂಬಿ ಜೇನು ಗೂಡಿನಂತೆ ಕಾಣುತ್ತಿತ್ತು. ರಸ್ತೆ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರಿಗಳ ವ್ಯಾಪಾರ ಅವಳಿಗೆ ಅವಳ ಊರಿನ ಸಂತೆಯ ನೆನಪನ್ನ ಮರುಕಳಿಸಿತು. ಅಲ್ಲೇ ಅಲ್ಪ ಸ್ವಲ್ಪ ದೂರಲ್ಲಿ ಕೈಕಾಲು ಕಳೆದುಕೊಂಡು ಭಿಕ್ಷೆ ಬೇಡುವವರ ಕಂಡು ಮೂಕ ಮನಸಿನಿಂದ ದೇವರ ಶಪಿಸಲು ತಲೆ ಎತ್ತಿ ಆಕಾಶದೆಡೆಗೆ ಕಣ್ಣುಬಿಟ್ಟಾಗ ಅವಳಿಗೆ ಕಂಡದ್ದು ತೂಗುಸೇತುವೆ. ಆ ಕಡೆ ಈ ಕಡೆ ಹತ್ತಿ ಇಳಿಯಲು ಮೆಟ್ಟಿಲು ಕೊಟ್ಟು ಹತ್ತಲಾಗದವರಿಗೆಂದೇ ಲಿಫ್ಟ್ ಇಟ್ಟು ತೂಗುಬಿಟ್ಟ ತೂಗುಯ್ಯಾಲೆಯಂತೆಯೇ ಕಂಡ ಆ ತೂಗುಸೇತುವೆ ಅವಳನ್ನ ಇಂಚು ಇಂಚಾಗಿ ಆಕರ್ಷಿಸಿದ್ದಲ್ಲದೆ ಬಾ ಬಾ ಎಂದು ಕೈ ಬೀಸಿ ಕರೆದಂತಾಯಿತು. ಚಹಾ ಕುಡಿದು ಮುಗಿಸಿ ಅಲ್ಲೇ ಇದ್ದ ಕಸದ ಬುಟ್ಟಿಗೆ ಚಹಾದ ಕಪ್ ಎಸೆದು ಬ್ಯಾಗನ್ನು ಹೆಗಲಿಗೇರಿಸಿಕೊಂಡವಳೇ ಒಂದೊಂದೇ ಮೆಟ್ಟಿಲೇರಿ ಏದುಸಿರು ಬಿಡುತ್ತಾ ತೂಗುಯ್ಯಾಲೆಯ ಸೇರಿ ನಿಂತೇ ಬಿಟ್ಟಳು.
ಹಾಗೆ ಸುತ್ತಲೂ ಕಣ್ಣಾಡಿಸುವಾಗ ಬಲಭಾಗದಲ್ಲಿ ಆನಂದಭವನ ಎಡಭಾಗಕ್ಕೆ ಸಾಯಿದರ್ಶಿನಿ ಹೋಟೆಲ್ಲುಗಳು ಮುಂದೆ ಹಿಂದೆ ನೋಡಿದರೆ ದೊಡ್ಡ ದೊಡ್ಡ ಜಾಹಿರಾತು ಫಲಕಗಳು. ಭಯಪಡುತ್ತಲೇ ಕೆಳಗೆ ನೋಡಿದರೆ ಅಂಕುಡೊಂಕಾದ ಸೀಳಿ ಇಬ್ಭಾಗವಾದ ರಸ್ತೆ, ಒಂದು ಕಡೆ ಹೋಗುವ ವಾಹನಗಳು ಮತ್ತೊಂದು ಕಡೆ ಬರುವ ವಾಹನಗಳು ಸಾಲಾಗಿ ಇರುವೆ ಸಾಲಿನಂತೆ  ಚಲಿಸುತ್ತಿರುವುದನ್ನು  ನೋಡುತ್ತಾ ನಿಂತುಬಿಟ್ಟಳು. ಹಾಗೆ ಸುಧಾರಿಸಿಕೊಳ್ಳುತ್ತ ನಿಂತಿರುವಾಗ ಬ್ರಿಡ್ಜ್ ಮೇಲೆ ಆಕಡೆ ಈಕಡೆ ಓಡಾಡುವ ಜನಗಳ ಗಜಿಬಿಜಿ  ಒಂದು ಕಡೆ , ಏನನ್ನೋ ಪಿಸುಗುಡುತ್ತಾ ಕೈ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಪ್ರೇಮಿಗಳ ಕಲರವ ಇನ್ನೊಂದು ಕಡೆ. ವಾಹನಗಳ ಹಾರನ್ ನ ಝೇಂಕಾರ ಮತ್ತೊಂದು ಕಡೆ ಈ ಎಲ್ಲದರ ಮಧ್ಯೆ ತನ್ನನ್ನು ತಾನು ಮರೆತುಬಿಟ್ಟಳು.
ಸೂರ್ಯ ತನ್ನಪಾಳಿ ಮುಗಿಸಿ ಬೀಳ್ಕೊಡುತ್ತಿದ್ದಾಗ ನಿಧಾನವಾಗಿ ಕತ್ತಲು ಅವರಿಸತೊಡಗಿತು. ಆಫೀಸ್ ಮುಗಿಸಿ ಮನೆಗೆ ಹೊರಡುವವರ ಸಂಖ್ಯೆಯೂ ಜಾಸ್ತಿಯಾಗಿ ರೋಡ್ ತುಂಬೆಲ್ಲಾ ಕಾರ್ ಮತ್ತು ಬೈಕ್ ಗಳು ಜಾಸ್ತಿಯಾದವು.  ಮಿಣ ಮಿಣ ಮಿರುಗುವ ವಾಹನಗಳ ಹಿಂಬದಿ ಮುಂಬದಿ ಲೈಟುಗಳು,ಕಟ್ಟಡಗಳ ಮೇಲೆ ಮಿನುಗುತ್ತಿದ್ದ ಸೀರಿಯಲ್ ಸೆಟ್ ಗಳು, ರಸ್ತೆ ಬದಿ ವ್ಯಾಪಾರದವರ ಜಗಮಗ ಲೈಟುಗಳು ಇಡೀ ರಸ್ತೆಗೆ ಮೆರುಗು ತಂದಿಟ್ಟವು.
 ಜಗದ ಪರಿವೇ ಇಲ್ಲದೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಚಿತ್ತಾಕರ್ಷಕ ಲೈಟ್ಗಳನ್ನು ನೋಡಿ ಸಂಭ್ರಮಿಸುತ್ತಿದ್ದ ಗೋಪಿಕಳನ್ನ ಆ ಸೀಳಿದ ರಸ್ತೆ ಗಬಕ್ಕನೇ ಸೆಳೆದು ಬಿಟ್ಟಿತು. ಆ ಅಂಕುಡೊಂಕಾದ ರಸ್ತೆಯಲ್ಲಿ ಕೆಂಪುಲೈಟು ಹತ್ತಿಸಿಕೊಂಡು ಹೋಗುವ ವಾಹನಗಳು ಒಂದೆಡೆ, ಬಿಳಿ ಲೈಟು ಹತ್ತಿಸಿಕೊಂಡು ಬರುವ ವಾಹನಗಳ ಹಿಂಡು ಇನ್ನೊಂದು ಕಡೆ, ಈ ದೃಶ್ಯ ಅವಳನ್ನ ಬೇರೊಂದು ಲೋಕಕ್ಕೆ ಕರೆದೊಯ್ಯಿತು.
ಜನ ಅಥವಾ ಜಾಗ ನಮ್ಮ ಜೀವನಕ್ಕೆ ಬರುವಾಗ ಬಿಳಿಯ ಲೈಟಿನ ತರಹ ಬರುತ್ತವೆ ನಾವು ಅದನ್ನ ಅಷ್ಟು ಗಮನಿಸುವುದಿಲ್ಲ, ನಮ್ಮ ಜೀವನದಿಂದ ಆಚೆ ಸರಿವಾಗ ಕೆಂಪು ಲೈಟಿನ ತರಹ ಸರಿಯುತ್ತವೆ.  ಜೀವನಕ್ಕೆ ಬರುವುದು ಹೋಗುವುದು ಎರೆಡೂ ಸಾಮಾನ್ಯ ಆದರೆ ಬರುವುದಕ್ಕಿಂತ ಹೋಗುವಾಗಲೇ ನಮ್ಮನ್ನ ಹೆಚ್ಚು ಕಾಡುವುದು.
ಹಾಗೆಯೆ ಕೆಲವೊಂದು ಸಾರಿ ನಮ್ಮ ಸ್ನೇಹ ಮಾಡುವ ಮೊದಮೊದಲು ಬಹುತೇಕರು ಬಿಳಿ ಲೈಟಿನ ತರಹ ಒಳ್ಳೆ ಗುಣಗಳನ್ನ ಮಾತ್ರ ಪ್ರದರ್ಶಿಸುತ್ತಾರೆ, ಸಣ್ಣಪುಟ್ಟ ಮನಸ್ತಾಪಕ್ಕೋ ಅಥವಾ  ಜಗಳಗಳಿಂದಲೋ ದೂರ ಸರಿವಾಗ ತಮ್ಮ ನಿಜಗುಣಗಳನ್ನ ಕೆಂಪು ಲೈಟಿನ ತರಹ ತೋರಿಸಿ ದೂರವಾಗುತ್ತಾರೆ. ಸ್ನೇಹ ಮಾಡಿದಾಗ ತುಂಬಾ ಕಾಳಜಿ ವಹಿಸುತ್ತಾರೆ ಆ ಕಾಳಜಿ ಎಷ್ಟಿರುತ್ತದೆ ಎಂದರೆ ನಾವು ಕೂಡ ನಮ್ಮ ಬಗ್ಗೆ ಅಷ್ಟೊಂದು ಕಾಳಜಿಯಿಂದ ಯೋಚನೆ ಮಾಡಿರುವುದಿಲ್ಲ ಬರುಬರುತ್ತಾ ಕಾಳಜಿ ಎನ್ನುವ ಹೆಸರಲ್ಲಿ ನಮ್ಮನ್ನ ನಿಯಂತ್ರಿಸೋಕೆ ಶುರುಮಾಡುತ್ತಾರೆ. ಅವರು ಅತಿಯಾಗಿ ನಿಯಂತ್ರಿಸುವಾಗಲೇ ಅವರ ಆ ಕೆಂಪು ಲೈಟಿನ ತರಹದ ಇನ್ನೊಂದು ಮುಖ ನಮಗೆ ಗೊತ್ತಾಗುವುದು ಅಂದೆನಿಸೋಕೆ ಶುರುವಾಗುತ್ತದೆ ಅವಳಿಗೆ. 
ಈ ಆಲೋಚನೆ ಬಂದ ಮೇಲೆ ಅವಳಿಗೆ ಅವಳ ಹಳೆಯ ಆಫೀಸ್ ಕಾಡುತ್ತಿರುವುದು ಸಹಜ ಎಂದೆನಿಸತೊಡಗಿತು, ಮುಂದೊಂದು ದಿನ ಈಗ ಇರುವ ಆಫೀಸ್ ಬಿಟ್ಟು ಹೋಗುವಾಗಲೂ ಸಹ ಇದೇ ಭಾವ ನನ್ನಲ್ಲಿ ಬರಬಹುದು ಎಂದೆನಿಸಿ ನಿಟ್ಟುಸಿರು ಬಿಟ್ಟು ತೂಗುಸೇತುವೆ ಇಳಿದು ಮನೆ ಸೇರಲು ಬಸ್ ಹಿಡಿದು ಕೂರುತ್ತಾಳೆ. ಅವಳು ಮನೆಕಡೆ ಮುಖ ಮಾಡಿದ್ದರೂ ಮನಸ್ಸು ಮಾತ್ರ ಗೊಂದಲದ ಗೂಡಾಗಿ ಮಾರತ್ತಳ್ಳಿ ಬ್ರಿಡ್ಜ್ ಮೇಲೆಯೇ ತೂಗುತ್ತದೆ, ತರತರದ ಯೋಚನೆಗಳಿಂದ ತಲೆಯು ಇಸ್ತ್ರಿಪೆಟ್ಟಿಗೆಯ ತರ ಬಿಸಿಯಾಗುತ್ತದೆ, ಈ ಎಲ್ಲದರಿಂದ ಆಚೆ ಬರಲು ತನ್ನಿಷ್ಟದ ಹಾಡುಗಳನ್ನು ಕೇಳುತ್ತಾ ಕಿಟಕಿಗೊರಗಿ ಕಣ್ಣು ಮುಚ್ಚುತ್ತಾಳೆ. ಆದರೂ ಮಾರತ್ತಳ್ಳಿಬ್ರಿಡ್ಜ್  ಮತ್ತು ತೂಗುಸೇತುವೆ ಅವಳ ಮನಸ್ಸನ್ನಪ್ಪಿ ಹಚ್ಚೆಒತ್ತಿ ಕಾಡುತ್ತಲೇ ಇತ್ತು.

            ಇಂತಿ,
                                 ಕವಿತಾ ಗೋಪಿಕುಂಟೆ 

Tuesday, 5 June 2018

5/6/2018 ರ ತುಮಕೂರು ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ "ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ"

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ನೀಡಿ ಪುರುಷರಿಗೆ ಸಮನಾಗಿ ನಿಲ್ಲುತ್ತಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ಸಾಕಷ್ಟು ಬಲಿಷ್ಠರಾಗಿದ್ದಾರೆ, ಶೈಕ್ಷಣಿಕವಾಗಿಯೂ ಮಹಿಳೆಯರದ್ದೇ ಮೇಲುಗೈ ಹೀಗಿರುವಾಗ ರಾಜಕೀಯವಾಗಿ ಬೆಳೆಯಲು ಪೂರಕವಾದ ವಾತಾವರಣ ನಮ್ಮಲ್ಲಿ ಇನ್ನು ಸಾಧ್ಯವಾಗುತ್ತಿಲ್ಲ. 130ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಲೋಕಸಭೆಯಲ್ಲಿ ಇರುವ ಒಟ್ಟು 543ಸ್ಥಾನದಲ್ಲಿ ಮಹಿಳೆಯರಿಗೆ ದಕ್ಕಿರುವುದು ಕೇವಲ  66 ಸ್ಥಾನಗಳು ಶೇಕಡಾವಾರು ಕೇವಲ 12.15% ಮಾತ್ರ. 
ಮೊನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇರುವ ಒಟ್ಟು 222 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿರುವುದು ಕೇವಲ 7 ಕ್ಷೇತ್ರಗಳು, ಶೇಕಡಾವಾರು 3.15% ಮಾತ್ರ. ಆರೂವರೆ ಕೋಟಿ ಜನಸಂಖ್ಯೆ ಇರುವ ನಮ್ಮ ಕರ್ನಾಟಕದಲ್ಲಿ ಪುರುಷರು ಮತ್ತು ಮಹಿಳೆಯರು ಸಮಬಲದಲ್ಲಿದ್ದರೂ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಭಾರಿ ಕಡಿಮೆ ಪ್ರಮಾಣದಲ್ಲಿರುವುದು ಶೋಚನೀಯ ಸಂಗತಿ.
ಈಗಾಗಲೇ ಇಂದಿರಾಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಜಯಲಲಿತರಂತಹ ದಿಟ್ಟ ಮಹಿಳೆಯರು ರಾಷ್ಟ್ರ ಮತ್ತು ರಾಜ್ಯಗಳನ್ನು ನಿಭಾಯಿಸಿ ತೋರಿಸಿದ್ದಾರೆ. ಈಗಿರುವ ಕೇಂದ್ರ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಮತ್ತು ನಿರ್ಮಲ ಸೀತಾರಾಮನ್ ರವರುಗಳು ತಮ್ಮ ಜವಾಬ್ದಾರಿಗಳನ್ನು ಪುರುಷರಿಗಿಂತ ಕಡಿಮೆಯಿಲ್ಲದಂತೆ ನಿಭಾಯಿಸುತ್ತಿದ್ದಾರೆ
ಕಾರ್ಪೊರೇಟ್ ವಲಯದಲ್ಲಿ ಕಿರಣ್ ಮಝುನ್ದಾರ್ ಷಾ , ಬ್ಯಾಂಕ್ ವಲಯದಲ್ಲಿ ಅರುಂಧತಿ ಭಟ್ಟಾಚಾರ್ಯ, ಚಂದ ಕೊಚ್ಚಾರ್ ರಂತವರುಗಳು ದೊಡ್ಡ ಹುದ್ದೆಗಳನ್ನು ಮಹಿಳೆಯರೂ ಕೂಡ ನಿಭಾಯಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಮನೆ ನೆಡೆಸುವುದರಿಂದ ಹಿಡಿದು ದೇಶ ಮುನ್ನೆಡೆಸುವುದರವರೆಗೆ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯರೇ ಎಂದು ಸಾಬೀತಾಗಿದ್ದರೂ ರಾಜಕೀಯದಲ್ಲಿ  ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಹೆಚ್ಚಿನ ಅವಕಾಶಗಳು ದೊರೆಯದಿರುವುದು ಯೋಚಿಸಬೇಕಾದ ಸಂಗತಿ.
ಮಹಿಳೆಯರ ಯೋಚನಾ ಲಹರಿ ಮತ್ತು ಪುರುಷರ ಯೋಚನಾಲಹರಿ ಬೇರೆ ಬೇರೆ, ಪುರುಷರೇ ಹೆಚ್ಚಾಗಿರುವ ಸದನದಲ್ಲಿ ಮಹಿಳೆಯರ ಮಾತಿಗೆ ಮನ್ನಣೆ ಸಿಗುವುದು ಕಷ್ಟ. ಮಹಿಳೆಯರ ಸಂಖ್ಯೆ ಕಡಿಮೆ ಇರುವ ಈಗಿನ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಂದ ಮಹಿಳೆಯರು ಹೊರಗುಳಿಯುವುದರಿಂದ ಮಹಿಳಾ ಸಬಲೀಕರಣಕ್ಕೆ ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಈಗಿನ ಸರ್ಕಾರಗಳು ವಿಫಲವಾಗಿವೆ ಎಂದೆನಿಸುತ್ತಿದೆ.
ಈಗಿನ ಬಹುತೇಕ ಚುನಾವಣೆಗಳಲ್ಲಿ ಮಹಿಳೆಯರಿಗಾಗಿ ಮೀಸಲಾತಿಯಿದೆ ಇದು ಸ್ವಾಗತಾರ್ಹವೇ ಆದರು ಮೀಸಲಾತಿ ಇರುವ ಕಡೆ ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಮಹಿಳೆಯರು ರಾಜಕಾರಣಿಗಳ  ಹೆಂಡತಿ ಮಗಳು ಅಥವಾ ರಾಜಕೀಯ ಕುಟುಂಬದ ಸಂಬಂಧಿಗಳಾಗಿರುತ್ತಾರೆ, ಇಂತಹ ಹಿನ್ನೆಲೆಯಿಂದ ಚುನಾಯಿತರಾದ ಬಹುತೇಕ ಮಹಿಳೆಯರು ಡಮ್ಮಿಗಳಾಗಿರುತ್ತಾರೆ ಅಧಿಕಾರವೆಲ್ಲವೂ ಅವರ ಮನೆಯ ಗಂಡಸರದ್ದೇ ಆಗಿರುತ್ತದೆ. ಅಧಿಕಾರ ಗಂಡಸರದ್ದಿರುವಾಗ ಮಹಿಳೆಯರಿಗಾಗಿ ಸಮಾಜದಲ್ಲಿ ಬದಲಾವಣೆ ತರುವುದು ಹೇಗೆ ಸಾಧ್ಯ ?
ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಭೆ ಮತ್ತು ನಾಯಕತ್ವದ ಗುಣ ಇರುವವರು ಒಳ್ಳೆಯ ನಾಯಕರಾಗಬಹುದೇವರತು ರಾಜಕೀಯ ನಾಯಕರಾಗುವುದು ಕಷ್ಟಸಾಧ್ಯ.
ಹಣ ಬಲ ಮತ್ತು ತೋಳ್ಬಲ ಇರುವವರು ಮಾತ್ರ ರಾಜಕೀಯ ನಾಯಕರಾಗಬಹುದು ಎಂಬ ಮಾತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಪ್ರತಿಭಾವಂತ ಮಹಿಳೆಯರಿಗೆ ಅವಕಾಶಗಳು ಸಿಕ್ಕಿ , ಸಮಾಜದಲ್ಲಿ ಈಗಿರುವ ರಾಜಕೀಯದ ಬಗೆಗಿನ ಅಭಿಪ್ರಾಯಗಳು ಬದಲಾದರೆ,
ಎಲ್ಲಾ ಎಲ್ಲೆಗಳ ಗೋಡೆಗಳನ್ನು ಕೆಡವಿ ಸಮರ್ಥನಾಯಕಿಯರು ನಮ್ಮ ಜನಪ್ರತಿನಿಧಿಗಳಾಗುವ ಕಾಲವು ದೂರವಿಲ್ಲ. ಮಹಿಳಾ ಮುಖ್ಯಮಂತ್ರಿಯು ನಮ್ಮ ಕರ್ನಾಟಕವನ್ನಾಳುವ ಕನಸು ನನಸಾಗದೇ ಇರುವುದಿಲ್ಲ.
               ಇಂತಿ,
                                    ಕವಿತಾ ಗೋಪಿಕುಂಟೆ

Sunday, 31 December 2017

31/12/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ಹೊಸವರ್ಷದ ನಿರ್ಣಯಗಳು"

http://prajapragathi.epapertoday.com/?yr=2017&mth=12&d=31&pg=7


ಜನವರಿ ಒಂದನೇ ತಾರೀಖು ನಮ್ಮ ಹೊಸ ವರ್ಷವಲ್ಲ ಆದರೂ ಎಲ್ಲರಂತೆ ಕ್ಯಾಲೆಂಡರ್ ಹೊಸ ವರ್ಷವನ್ನು ಕೇಕ್ ಕತ್ತರಿಸಿ ಸ್ವಾಗತಿಸುವುದಷ್ಟೇ ಅಲ್ಲ, ನಮ್ಮ ಏಳಿಗೆಗಾಗಿ ಹೊಸ ನಿರ್ಧಾರಗಳೊಂದಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದರ ಮೂಲಕ ಸ್ವಾಗತಿಸುವುದು ಬಹಳ ಮುಖ್ಯ. ಹೊಸ ವರ್ಷದ ದಿನದಂದು ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪಾಶ್ಚಿಮಾತ್ಯರ ಸಂಸ್ಕೃತಿ, ಯಾವ ಸಂಸ್ಕೃತಿಯಾದರೇನು ಒಂದು ಒಳ್ಳೆಯ ಬೆಳವಣಿಗೆ, ನಮ್ಮ ಏಳಿಗೆಗೆ ಸಹಕಾರಿಯಾಗುವುದಾದರೆ ಅದನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ.
ಹೊಸ ವರ್ಷ ಆರಂಭವಾಗುವುದಕ್ಕಿಂತ ಮುಂಚೆ, ಕಳೆದ ವರ್ಷ ತೆಗೆದುಕೊಂಡ ನಿರ್ಣಯಗಳು, ಮಾಡಿ ಮುಗಿಸಿದ ಕೆಲಸಗಳು ಮತ್ತೆ ಇನ್ನು ಮುಗಿದಿರದ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಮುಗಿದ ಕೆಲಸಗಳನ್ನು ಮಾಡುವಾಗ ಎದುರಾದ ತೊಂದರೆಗಳು, ನಾವು ಮಾಡಿದ ಸರಿ ತಪ್ಪುಗಳನ್ನು ಪಟ್ಟಿ ಮಾಡಿ ವಿಮರ್ಶೆ ಮಾಡಿಕೊಳ್ಳುಬೇಕು, ಇನ್ನೂ ಮುಗಿಯದೆ ಇರುವ ಕೆಲಸಗಳು ಯಾವ ಕಾರಣಕ್ಕೆ ಬಾಕಿ ಇವೆ ಎಂದು ಕಾರಣವನ್ನು ಹುಡುಕಿ, ಬಾಕಿ ಇರುವ ಕೆಲಸಗಳನ್ನು ಮುಂದಿನ ವರ್ಷದ ನಿರ್ಣಯಗಳ ಪಟ್ಟಿಗೆ ಸೇರಿಸಿಕೊಳ್ಳಬೇಕು.
ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯ ತಿಳಿಯುತ್ತದೆ, ಜೀವನದ ಬಗ್ಗೆ ಹೆಮ್ಮೆ ಎನಿಸಿ ಮುಂದಿನ ದಿನಗಳ ಬಗ್ಗೆ ಉತ್ಸಾಹ ಬರುತ್ತದೆ, ಹೊಸ ಹೊಸ ಸಾಧನೆಗಳ ಬಗ್ಗೆ ಅರಿವಾಗಿ ಸಾಧಿಸಬೇಕೆಂಬ ಆಸೆಯುಂಟಾಗುತ್ತದೆ.
ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಷ್ಟೇ ಅಲ್ಲ ನಾವು  ತೆಗೆದುಕೊಂಡ ನಿರ್ಣಯಗಳು ಸರಿಯಾಗಿವೆಯೇ ಎಂದೊಮ್ಮೆ ಯೋಚಿಸುವುದು ಅತ್ಯಗತ್ಯ ಏಕೆಂದರೆ ಒಬ್ಬ ಮನುಷ್ಯ ಜೀವನದಲ್ಲಿ ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲ, ನಮ್ಮ ಇತಿಮಿತಿಯ  ಒಳಗೆ ನಮ್ಮ ಅಗತ್ಯತೆಗೆ ತಕ್ಕಂತೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ತೆಗೆದುಕೊಂಡ ಎಲ್ಲಾ ನಿರ್ಣಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಬೇಕು.
ನಮ್ಮ ನಿರ್ಣಯಗಳ ಪಟ್ಟಿ ತಯಾರಾದಾಗ, ಅವುಗಳಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯಲ್ಲಿ ಮಾಡಬಹುದಾದ ನಿರ್ಣಯಗಳನ್ನಾಗಿ ವಿಂಗಡಿಸಿಕೊಳ್ಳಿ. ಅವುಗಳನ್ನು ಸಾಧನೆ ಮಾಡಲು ಬೇಕಾದ ಪೂರ್ವತಯಾರಿಗೆ ಮತ್ತು ಸಾಧಿಸುವುದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು ಯೋಚಿಸಿ ವೇಳಾಪಟ್ಟಿ ಹಾಕಿಕೊಳ್ಳುವುದು ಉತ್ತಮ.
ಪೂರ್ವತಯಾರಿ ಇಲ್ಲದೆ, ಸರಿಯಾಗಿ ಪ್ಲಾನ್ ಮಾಡಿಕೊಳ್ಳದೆ ಯಾವ ಕೆಲಸವನ್ನು ಮಾಡಬಾರದು. ನಾವು ಇಲ್ಲಿ ಯಾರಿಗಾಗಿಯೂ ಸಾಧಿಸಿ ತೋರಿಸಬೇಕಾಗಿಲ್ಲ ನಮಗಾಗಿ ನಮ್ಮ ಆತ್ಮ ಸಂತೋಷಕ್ಕಾಗಿ ಸಾಧಿಸಬೇಕಾಗಿರುವುದರಿಂದ ಆತುರ ಪಡದೆ ನಿಧಾನವಾಗಿ ಆಲೋಚಿಸಿ ಕೆಲಸಗಳನ್ನು ಆರಂಭಿಸಬೇಕು. ಮಾರ್ಗದರ್ಶನ ಬೇಕಿದ್ದಲ್ಲಿ ಸರಿಯಾದ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು, ನನಗೆ ಆಗುವುದಿಲ್ಲ ಎನ್ನುವ ಹುಳವನ್ನು ತಲೆಯಿಂದ ತೆಗೆದು ಹಾಕಿ ಶ್ರಮವಹಿಸಿ ಮಾಡಿದ್ದಲ್ಲಿ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಒಂದು ವೇಳೆ ಸಮಯದ ಅಭಾವ ಅನಾರೋಗ್ಯ ಮತ್ತಿತರ ಕಾರಣಗಳಿಂದ ನಾವು ತೆಗೆದುಕೊಂಡ ನಿರ್ಣಯಗಳನ್ನು ವರ್ಷಾಂತ್ಯದ ಒಳಗೆ ಮುಗಿಸಲಾಗದಿದ್ದರೆ ಕೊರಗುವುದು ಬೇಡ. ಮುಗಿಯದೆ ಉಳಿದ ಕೆಲಸಗಳನ್ನು, ಮಾಡಲೇಬೇಕಾದ ಕೆಲಸಗಳನ್ನು ಮುಂದಿನ ವರ್ಷದ ಪಟ್ಟಿಗೆ ಸೇರಿಸಿಕೊಂಡರೆ ಆಯಿತು. ಒಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ನಮ್ಮ ಸಾಧನೆಗಳ ಪಟ್ಟಿಬೆಳೆದು ನಮ್ಮ ಏಳಿಗೆಯಾಗುವುದಷ್ಟೇ ಮುಖ್ಯ.  

Sunday, 19 November 2017

15/10/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ಕ್ಯಾಂಟೀನ್ ನಲ್ಲಿ ಜ್ಞಾನೋದಯ"


ಮೊನ್ನೆ ಒಂದು ದಿನ ಕೆಲಸದ ಒತ್ತಡ ಜಾಸ್ತಿಯಾಗಿ ತಲೆನೋವು ಬಂದಿತ್ತು ಹೀಗೆ ತಲೆನೋವಾದಾಗಲೆಲ್ಲಾ ಶುಂಠಿ ಕಾಫಿ ಕುಡಿಯೋ ಅಭ್ಯಾಸ ನನಗೆ. ಕಾಫಿ ಕುಡಿಯೋಣ ಎಂದು ಕ್ಯಾಂಟೀನ್ ಕಡೆ ಕಾಲೆಳೆದೆ ಅಷ್ಟು ದೊಡ್ಡ ಕ್ಯಾಂಟೀನ್ ನಲ್ಲಿ ಒಬ್ಬಳೇ ಹುಡುಗಿ ಕೂತು ಕಾಫಿ ಹೀರುತ್ತಾ ಏನನ್ನೋ ಬರೆಯುತ್ತಿರುವುದನ್ನು ಗಮನಿಸಿದೆ, ಯಾರಪ್ಪಾ ಇದು ಬ್ರೇಕ್ ತೆಗೆದುಕೊಳ್ಳುವ ಸಮಯದಲ್ಲೂ ಬರೆಯುತ್ತಿದ್ದಾಳೆ ಈ ಹುಡುಗಿ ಅಂದುಕೊಂಡು ಕಾಫಿ ಕೌಂಟರಿಗೆ ಹೋಗಿ ಕಾಫಿ ತೆಗೆದುಕೊಂಡು ಅವಳೇನು ಬರೆಯುತ್ತಿರಬಹುದು ನೋಡೇ ಬಿಡುವ ಎನ್ನುವ ಕುತೂಹಲಕ್ಕೆ ಅವಳೆಡೆಗೆ ಹೆಜ್ಜೆ ಹಾಕುತ್ತಿರುವಾಗ ಗೊತ್ತಾಯಿತು ಅವಳು ಗೋಪಿಕ ಎಂದು. ನನ್ನ ಆಫೀಸ್ ನಲ್ಲಿರುವ ನನ್ನ ಸ್ನೇಹಿತೆಯರ ಗುಂಪಿನಲ್ಲಿ ಗೋಪಿಕ ಕೂಡ ಒಬ್ಬಳಾದ್ದರಿಂದ ತುಸು ಸಲುಗೆಯಿಂದಲೇ ಕಾಫಿಯನ್ನು ಟೇಬಲ್ ಮೇಲಿರಿಸಿ ಅವಳ ಮುಂದಿನ ಛೇರ್ ಎಳೆದು ಕೂತೆ. ಕಾಫಿ ಹೀರುತ್ತಾ ಏನೇ ಗೋಪಿಕ ಬ್ರೇಕ್ ಟೈಮಲ್ಲೂ ಬರಿತಾ ಇದಿಯಾ ಅದು ಇಷ್ಟು ದೊಡ್ಡ ನೋಟ್ ಬುಕ್ ನಲ್ಲಿ ಎಂದು ತಮಾಷೆಯಾಗಿ ಕೇಳಿದೆ ಅದಕ್ಕವಳು ಎಂಬಿಎ ಮಾಡುತ್ತಿದ್ದೇನೆ ಕಣೇ ವೀಕ್ ಎಂಡ್ ಕ್ಲಾಸ್ ಗಳು ಇರುತ್ತವೆ, ಸ್ವಲ್ಪ ಅಸೈನ್ ಮೆಂಟ್ ಬಾಕಿ ಇತ್ತು ಬರಿತಾ ಇದಿನಿ ಆಂದಳು. ಡಿಗ್ರಿ ಮಾಡಿದಿಯ ಕೈಯಲ್ಲಿ ಒಂದು ಒಳ್ಳೆಯ ಕೆಲಸ ಬೇರೆ ಇದೆ ಇವಾಗ ಓದೋದೆಲ್ಲಾ ಬೇಕಿತ್ತಾ ಎಂದು ಕೇಳಿದ್ದಕ್ಕೆ ಅವಳು ಅಯ್ಯೋ ನಾನು ಮಾಡಿರೋ ಬ್ಯಾಚುಲರ್ ಡಿಗ್ರಿ ನೋಡಿ ಮುಂದೆ ನನ್ನ ಮಕ್ಕಳು ಆಡಿಕೊಳ್ಳಬಾರದು ಅದಕ್ಕೆ ಮುಂದೆ ಓದುತ್ತಿದ್ದೇನೆ ಎಂದು ತಮಾಷೆ ಮಾಡಿದಳು. ಸ್ವಲ್ಪ ಹೊತ್ತು ಮೌನವಹಿಸಿ ಮತ್ತೊಂದು ಸಿಪ್ ಕಾಫಿ ಕುಡಿದು ತನ್ನ ಮನದಾಳವನ್ನು ಬಿಚ್ಚಿಡಲು ಶುರು ಮಾಡಿದಳು.
ಈ ಟೈಮ್ ಅನ್ನೋದು ಉರುಳುತ್ತಾ ಇರುತ್ತದೆ ನೋಡುನೋಡುತ್ತಾ ವರ್ಷಗಳೇ ಕಳೆದು ಹೋಗುತ್ತವೆ, ನಾವು ಸುಮ್ಮನೆ ಒಂದು ದಿನ ಕಳೆಯುವುದು ನಮ್ಮಲ್ಲಿ ಇರುವ ಒಂದು ಕಾಯಿನ್ ದುಡ್ಡನ್ನ ನದಿಗೆ ಹಾಕುವುದು ಎರಡೂ ಒಂದೇ, ಕಳೆದು ಹೋದ ಸಮಯ ಮತ್ತು ದುಡ್ಡು ಮತ್ತೆ ಸಿಗುವುದಿಲ್ಲ.  ಸಮಯ ಇರುವಾಗಲೇ ಉಪಯೋಗಿಸಿಕೊಂಡು ಬಿಡಬೇಕು ಅಂದಳು. ನನ್ನ ಹತ್ತಿರ ಸಮಯ ಇದೆ ಸೌಕರ್ಯಗಳು ಇವೆ,  ಇರುವ ಈ ಅವಕಾಶಗಳನ್ನು ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಜೀವನದಲ್ಲಿ ಬೆಳೆಯಬೇಕು ನಾನು ಎಂದು ಅವಳೆಂದಾಗ ಮರು ಮಾತಾಡದೆ ಅವಳನ್ನೆ ದಿಟ್ಟಿಸುತ್ತಿದ್ದೆ ನಾನು.
ಈ ಜಗತ್ತಿನಲ್ಲಿ ಇರುವ ಅತಿ ದೊಡ್ಡ ಶಕ್ತಿಯೆಂದರೆ ಅದು ನಮ್ಮ ಮನಸಿನ ಶಕ್ತಿ, ಈ ಮನಶಕ್ತಿ ಅಪಾರವಾದದ್ದು ಇದಕ್ಕೆ ಕೊನೆಯೇ ಇಲ್ಲ.  ಮನಶಕ್ತಿ ಮತ್ತು ನಮ್ಮ ಧೃಡ ನಂಬಿಕೆಯಿಂದ ಈ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಸಕಾರಾತ್ಮಕವಾದ ಆಲೋಚನೆಯಿಂದ ನಾವು ಏನಾಗಬೇಕು ಏನನ್ನು ಸಾಧಿಸಬೇಕು ಎಂಬುದನ್ನು ನಿರ್ಧರಿಸಿ ಆ ವಿಷಯದ ಮೇಲೆ ಗಮನ ಹರಿಸಿದರೆ ನಮ್ಮ ಮನಸ್ಸು ಅದರೆಡೆಗೆ ಸಂಪೂರ್ಣವಾಗಿ ವಾಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಾಧಿಸಬೇಕು ಎಂದು ಹೊರಟಾಗ ನೂರಾರು ತೊಂದರೆಗಳು ಎದುರಾಗುತ್ತವೆ ಕೆಲವು ಬಾರಿ ನಮ್ಮ ತಪ್ಪಿನಿಂದಲೂ ಕೂಡ ಎಡವಿ ಬೀಳುತ್ತೇವೆ ಆಗ  ನಮ್ಮ ಮೇಲಿನ ವಿಶ್ವಾಸವನ್ನು ನಾವು ಕಳೆದುಕೊಳ್ಳದೆ ಸತತವಾಗಿ ಕಠಿಣ ಶ್ರಮವನ್ನು ಹಾಕಿ ಪ್ರಯತ್ನಿಸಿದರೆ ಖಂಡಿತಾ ಗೆಲ್ಲುತ್ತೇವೆ.
ಒಳ್ಳೆಯ ಕೆಲಸ ಇದೆ ಸ್ವಲ್ಪ ದುಡ್ಡು ಕೂಡ ಬರುತ್ತಿದೆ ಇಷ್ಟೇ ಸಾಕು ಎಂದು ಕೂತರೆ ಎಲ್ಲರ ತರಹ ಸಾಮಾನ್ಯವಾಗಿ ಜೀವನವನ್ನು ಸಾಗಿಸಬಹುದೇ ವಿನಹ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಪ್ರತಿ ದಿನ ಹೊಸದನ್ನು ಕಲಿಯಬೇಕು ನಮ್ಮ ಕಂಪರ್ಟ್ ಜೋನ್ ಅನ್ನು ಬಿಟ್ಟು ಆಚೆ ಬರಬೇಕು ಆಗ ಮಾತ್ರ ನಾವು ಹೊಸ ಪ್ರಪಂಚಗಳನ್ನು ನೋಡುಲು ಸಾಧ್ಯ, ಜೀವನದಲ್ಲಿ ಹೊಸತನ್ನು ಕಾಣಲು ಸಾಧ್ಯ.
ಬಡ ಕುಟುಂಬದಲ್ಲಿ ಹುಟ್ಟಿದ ನಾನು ಅದು ಹೇಗೆ ಲಕ್ಷಾಂತರ ರೂಪಾಯಿ ಫೀಸ್ ಕಟ್ಟೋಕೆ ಸಾಧ್ಯ ಎಂದು ನೀನು ಯೋಚಿಸಬಹುದು, ನಾನು ಬಡವಳೆ ಇರಬಹುದು ನಾನು ಯಾವತ್ತೂ ನನ್ನ ಹಿನ್ನೆಲೆಯನ್ನು ನೋಡಿ ಕನಸು ಕಾಣೋದಿಲ್ಲ ಕನಸಿಗೆ ಸಾಧನೆಯ ಗುರಿಗೆ ನಮ್ಮ ಹಿನ್ನೆಲೆ ಬೇಕಾಗಿಲ್ಲ ಸಾಧಿಸುವಂತಹ ಮನಸ್ಸು ಮಾತ್ರ ಬೇಕು.
ಹಾಗೆಯೇ ಇವತ್ತು ಸಮಾಜ ತುಂಬಾ ಒಳ್ಳೆಯದಿದೆ ಯಾರಾದರೂ ಸಾಧಿಸಬೇಕು ಎಂದು ಹೊರಟರೆ ಸಾವಿರಾರು ಜನರು ಸಹಾಯ ಮಾಡಲು ಮುಂದೆ ಬರುತ್ತಾರೆ, ಬ್ಯಾಂಕ್ ಗಳಿವೆ ಸಾಲ ಕೊಡುತ್ತವೆ.  ಇವತ್ತಿನ ದಿನ ಸಾಧನೆ ಮಾಡುತ್ತೇವೆ ಅನ್ನುವ ಮನಸ್ಸಿರುವವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಲು ಪೂರಕವಾದಂತಹ ವಾತಾವರಣವಿದೆ ಇಷ್ಟೆಲ್ಲಾ ಇದ್ದೂ ಯಾವುದನ್ನೂ ಉಪಯೋಗಿಸಿಕೊಳ್ಳದೆ ನಮ್ಮ ಜೀವನ ಸವೆಸಿದರೆ ಈ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಸಾಧನೆ ಅನ್ನೊದು ಸುಮ್ಮನೆ ಬರುವುದಿಲ್ಲ ತುಂಬಾ ಏಳು ಬೀಳುಗಳು ಇರುತ್ತವೆ, ಈಗ ನಾವು ಕಾಫಿ ಕುಡಿಯುತ್ತಾ ಹೇಗೆ ಎಂಜಾಯ್ ಮಾಡುತ್ತೇವೋ ಹಾಗೆಯೇ ಎಲ್ಲಾ ಕಷ್ಟಗಳನ್ನು ಎಂಜಾಯ್ ಮಾಡಬೇಕು ಎಂದೇಳಿ ಮಿಕ್ಕ ಕಾಫಿಯನ್ನು ಕುಡಿದು ಮುಗಿಸಿ, ಸರಿ ಕಣೇ ಟೈಮ್ ಆಯಿತು ಇವಾಗ ಮೀಟಿಂಗ್ ಇದೆ ಮತ್ತೆ ಸಿಗೋಣ ಎಂದೇಳಿ ಹೊರಟುಹೋದಳು. ಗೋಪಿಕಳ ಮಾತುಗಳು ನನ್ನನ್ನು ಸಂಪೂರ್ಣವಾಗಿ ಸೆರೆಹಿಡಿದಿದ್ದವು, ಧೃಡ ಸಂಕಲ್ಪ ಮತ್ತವಳ ಸಾಧನೆಯೆಡೆಗಿನ ತುಡಿತ ಅವಳ ಪ್ರತಿ ಪದದಲ್ಲೂ ಎದ್ದು ಕಾಣುತ್ತಿತ್ತು.
ಅವಳ ಮಾತುಗಳನ್ನು ಕೇಳುತ್ತಾ ತಲೆನೋವು ನನ್ನನ್ನು ಬಿಟ್ಟುಹೋಗಿದ್ದು ಅರಿವೇ ಆಗಲಿಲ್ಲ ವೀಕ್ ಎಂಡಿನಲ್ಲಿ ಸುಮ್ಮನೆ ಟೈಮ್ ವೆಸ್ಟ್ ಮಾಡುತ್ತಿದ್ದ ನನ್ನ ತಪ್ಪಿನ ಅರಿವಾಗಿ ನಾನು ಕೂಡ ಗೋಪಿಕಳ ಹಾಗೇ ಸಾಧನೆಯೆಡೆಗೆ ಹೋಗಬೇಕೆಂಬ ನಿರ್ಧಾರದೊಂದಿಗೆ ಕ್ಯಾಂಟೀನ್ ನಿಂದ ಆಚೆಬಂದೆನು.

Monday, 25 September 2017

24/09/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ತಪ್ಪಿಲ್ಲದದ್ದರೂ ವಿಚ್ಛೇದಿತರಾಗುವುದು"


ಮದುವೆಯೆಂದರೆ ಅದೊಂದು ಪವಿತ್ರ ಬಂಧ ಏಳೇಳು ಜನ್ಮದ ಅನುಬಂಧ. ಸುಸಂಸ್ಕೃತ ನಾಡಾದ ನಮ್ಮ ಭಾರತ ದೇಶದಲ್ಲಿ ಮದುವೆಗೆ ವಿಶಿಷ್ಟವಾದ ಸ್ಥಾನ ಮಾನವಿದೆ. ನಮ್ಮೆಲ್ಲರ ಜೀವನದಲ್ಲಿ ಮದುವೆಯೆಂಬುದು ಒಂದು ಮಹತ್ತರವಾದ ಘಟ್ಟ, ಅಪ್ಪ ಅಮ್ಮಂದಿರಿಗಂತು ಮಕ್ಕಳ ಮದುವೆ ಮಾಡುವುದು ಅವರ ಜೀವಮಾನದ ಸಾಧನೆಗಳಲ್ಲೊಂದು.  
ಇತ್ತೀಚಿನ ದಿನಗಳಲ್ಲಿ ಬಹುತೇಕ ಮದುವೆಗಳು ಬಹುಬೇಗ ಕಳಚಿಬಿದ್ದು ದಂಪತಿಗಳು ಡೈವರ್ಸ ಪಡೆದು ದೂರಾಗುತ್ತಿದ್ದಾರೆ. 
ಈ ಡೈವರ್ಸ ಎಂಬ ಮಹಾಮಾರಿಯು ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿದೆ ಆದರೆ ಸುಸಂಸ್ಕೃತಿಗೆ ಹೆಸರಾದ ಗಂಡನನ್ನು ದೇವರೆಂದು ಪೂಜಿಸುವ ನಮ್ಮ ಭಾರತದಲ್ಲಿಯೂ ಹೆಚ್ಚಾಗಿರುವುದು ಶೋಚನೀಯ ಸಂಗತಿ. ಒಂದು ಅಂಕಿಅಂಶದ ಪ್ರಕಾರ ಇಡೀ ನಮ್ಮ ದೇಶದಲ್ಲಿ ಡೈವರ್ಸ ತೆಗೆದುಕೊಳ್ಳುವುದರಲ್ಲಿ ನಮ್ಮ ಕರ್ನಾಟಕವು 4ನೇ ಸ್ಥಾನದಲ್ಲಿದೆ ಕೇರಳ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. 
ಬದಲಾದ ಜೀವನ ಶೈಲಿ ಮತ್ತು ಹೊಂದಾಣಿಕೆಯ ಕೊರತೆಯಿಂದ ಹಲವರು ಡೈವರ್ಸ ಪಡೆದರೆ ಇನ್ನೂ ಕೆಲವರು ಮಾಡದ ತಪ್ಪಿಗೆ ಡೈವರ್ಸ ಪಡೆದು ವಿಚ್ಚೇದಿತರು ಎಂದೆನಿಸಿಕೊಳ್ಳುತ್ತಿದ್ದಾರೆ 
ಒಂದು ಹುಡುಗ ಅಥವಾ ಹುಡುಗಿ ತಾವು ಪ್ರೀತಿಸಿದವರ ವಿಷಯವನ್ನು ಪೋಷಕರ ಮುಂದೆ ಪ್ರಸ್ತಾಪಿಸದೆ ಅವರು ಹೇಳುವವರನ್ನು ಮದುವೆಯಾಗಿ ಮದುವೆಯ ನಂತರ ತನ್ನ ಸಂಗಾತಿಯಿಂದ ವಿಚ್ಛೇದನ ಪಡೆದು ಪ್ರೀತಿಸಿದವರನ್ನು ಮದುವೆಯಾದ ಪ್ರಸಂಗಗಳು ಬೇಕಾದಷ್ಟಿವೆ ಇನ್ನೂ ಕೆಲವರು ಪೋಷಕರ ಬಲವಂತಕ್ಕೆ ಅವರು ತೋರಿಸಿದವರ ಜೊತೆ ಒಪ್ಪಿಗೆ ಸೂಚಿಸಿ ಮದುವೆಗೆ ಮುನ್ನಾದಿನ ಮದುವೆ ಮನೆಯಿಂದ ಪ್ರೀತಿಸಿದವರ ಜೊತೆ ಓಡಿ ಹೋದ ಪ್ರಸಂಗಗಳೂ ಇವೆ. 
ನನಗೆ ಗೊತ್ತಿರುವ ಗೆಳತಿಯೊಬ್ಬಳಿಗೆ ಮದುವೆಯಾಯಿತು ಅವಳ ಪತಿರಾಯ ಅವರ ಪ್ರೀತಿ ವಿಚಾರವನ್ನು ಅವನ ಪೋಷಕರಿಗೆ ಹೇಳಲು ಹೆದರಿ ಇವಳನ್ನು ಮದುವೆಯಾಗಿದ್ದನು. ಮದುವೆಯಾದ ಸ್ವಲ್ಪ ದಿನದಲ್ಲೇ ನನ್ನ ಸ್ನೇಹಿತೆಗೆ ಡೈವರ್ಸ ಕೊಟ್ಟು ಅವನ ಪ್ರಿಯತಮೆಯನ್ನು ಮದುವೆಯಾದನು.  ಅವನು ಅವನ ಪ್ರೀತಿ ವಿಚಾರವನ್ನು ಹೇಳಿ ಅಥವಾ ಅವನಿಗೆ ಈ ಮದುವೆ ಇಷ್ಟವಿಲ್ಲ ಎಂದು ಅವನ ಪೋಷಕರಿಗೆ ಹೇಳಿಬಿಡಬಹುದಿತ್ತು ಆದರೆ ಅನ್ಯಾಯವಾಗಿ ಏನು ತಪ್ಪು ಮಾಡದ ಒಂದು ಹೆಣ್ಣಿಗೆ ಡೈವರ್ಸ ಕೊಟ್ಟು ವಿಚ್ಛೇದಿತೆ ಎಂಬ ಪಟ್ಟಕಟ್ಟಿದ. 
ನಮಗೆ ಗೊತ್ತಿರುವ ಬಳಗದಲ್ಲಿ ಹುಡುಗಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ಅವಳ ಅಪ್ಪನಿಗೆ ತಿಳಿದು ಅವಳನ್ನು ಗದರಿಸಿ ಮನೆಯಲ್ಲಿರಿಸಿ ಅವಳಿಗೆ ಮದುವೆ ಗೊತ್ತುಮಾಡಿದರು ಆ ಹುಡುಗಿಯು ಅವರಪ್ಪನ ಮೇಲೆ ಸೇಡುತೀರಿಸಿಕೊಳ್ಳಲು ಮದುವೆಗೆ ಒಪ್ಪಿಗೆ ಸೂಚಿಸಿ ಆರತಕ್ಷತೆಯ ದಿನ ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋದಳು.  ಈ ಪ್ರಕರಣದಲ್ಲಿ ಮದುವೆಯಾಗ ಬಂದ ಹುಡುಗ ಮತ್ತು ಅವನ ಪೋಷಕರು ಮದುವೆ ರದ್ದಾದ ಕಾರಣ ಬಂಧು ಬಾಂಧವರು ಮತ್ತು ಸ್ನೇಹಿತರ ಮುಂದೆ ಬಾರಿ ಮುಜುಗರವನ್ನು ಅನುಭವಿಸಬೇಕಾಯಿತು 
ಇಲ್ಲಿ ನಾವು ಗಮನಿಸಬೇಕಾದದ್ದು ಎರಡು ಅಂಶಗಳು ಮೊದಲನೆಯದಾಗಿ ತಮ್ಮ ಪ್ರೀತಿಯ ವಿಚಾರ ಹೇಳಲಾಗದೆ ಇರುವುದು ಅಥವಾ ತಮ್ಮ ಪ್ರೀತಿಗಾದ ಅವಮಾನಕ್ಕೆ ಪೋಷಕರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಿಂತ ತಮ್ಮನ್ನು ಮದುವೆಯಾದ ಅಥವಾ ಮದುವೆಯಾಗ ಬಂದವರ ಜೀವನದ ಪ್ರಶ್ನೆ 
ಎರಡನೆಯದಾಗಿ ಮದುವೆಯೆಂದರೆ ಹುಡುಗಾಟವಲ್ಲ ಅದು ಹೆಣ್ಣು ಹೆತ್ತವರಂತೂ ಜೀವನವಿಡೀ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದ ಜೊತೆಗೆ ಸಾಲವನ್ನು ಮಾಡಿ ಮಗಳ ಮದುವೆಗೆಂದು ಸುರಿಯುತ್ತಾರೆ ಇಂತಹ ಸಂದರ್ಭದಲ್ಲಿ ಮದುವೆ ಮುರಿದು ಬಿದ್ದರೆ ಆ ಹಿರಿಯ ಜೀವಗಳಿಗೆ ಆಗುವ ನೋವು ಸಂಕಟ ಮತ್ತು ಅವಮಾನದ ಬಗ್ಗೆ ಒಮ್ಮೆ ಯೋಚಿಸಿ ನೋಡಿ. 
ಪೋಷಕರು ನಿರ್ಧರಿಸಿದ ಸಂಬಂಧ ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಿಬಿಡಿ ಒಂದು ದೊಡ್ಡ ದುರಂತ ಮಾಡಿ ಪೋಷಕರನ್ನು ನೋಯಿಸುವುದರ ಮುಂದೆ ಚಿಕ್ಕ ಮಾತಿನಲ್ಲಿ ಪುಟ್ಟದಾಗಿ ಕೊಡುವ ನೋವು ಎನೇನೂ ಅಲ್ಲ.  ಈ ಜಗತ್ತಿನಲ್ಲಿ ಬೇರೆಯವರ ಜೀವನದಲ್ಲಿ ಆಟವಾಡಲು ಯಾರಿಗೂ ಹಕ್ಕಿಲ್ಲ,  ಯಾರು ಆಟವಾಡಬಾರದೂ ಕೂಡ ಬೇರೆಯವರ ಭವಿಷ್ಯ ಕೂಡ ನಮ್ಮ ಭವಿಷ್ಯದಂತೆಯೇ. 
ಪೋಷಕರು ಕೂಡ ಮದುವೆಯಂತಹ ಬಹುದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಕ್ಕಳ ಇಷ್ಟ ಕಷ್ಟಗಳನ್ನು ಕೇಳಿ ಸಂಬಂಧವನ್ನು ಗೊತ್ತುಮಾಡುವುದು ಉತ್ತಮವೆನಿಸುತ್ತದೆ. ತಾಳ್ಮೆಯಿಂದ ಆಲೋಚಿಸಿ ಮದುವೆ ನಿರ್ಧಾರ ತೆಗೆದುಕೊಂಡಲ್ಲಿ ಎಷ್ಟೋ ಹುಡುಗ ಹುಡುಗಿಯರು ತಮ್ಮ ತಪ್ಪಿಲ್ಲದೇ ವಿಚ್ಛೇದಿತರಾಗುವುದನ್ನು ತಪ್ಪಿಸಬಹುದು 
                                              - - ಕವಿತಾ ಗೋಪಿಕುಂಟೆ 

Saturday, 9 September 2017

10/9/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ಭಾವನೆಗಳು ಇಂಟರ್‌ನೆಟ್ ನಲ್ಲಿ ಸಿಗೋದಿಲ್ಲ "


ಇಂಟರ್ನೆಟ್ ಎಂಬ ಮಾಯಾಜಾಲದಿಂದ ಇಡೀ ಜಗತ್ತೇ ಸಂಪರ್ಕದಲ್ಲಿದೆ. ಈಗಿನ ಸ್ಕೂಲ್ ಮಕ್ಕಳಿಂದ ವಯಸ್ಸಾದವರವರೆಗೂ ಸ್ಮಾರ್ಟ್ ಫೋನ್ ಎಂಬ ಪೊಟ್ಟಣಕ್ಕೆ ಮನಸೋತಿದ್ದಾರೆ . ಕಡ್ಡಾಯ ಎನ್ನುವಂತೆ ಪ್ರತಿಯೊಬ್ಬರೂ ಫೇಸ್ಬುಕ್ ಬಳಸುತ್ತಿದ್ದಾರೆ. ಗುಂಪಿನೊಳಗೆ ಅಪ್ಪಿ ತಪ್ಪಿ ಯಾರಾದರೂ ಫೇಸ್ಬುಕ್ ಬಳಸುತ್ತಿಲ್ಲ ಎಂದರೆ ಇಡೀ ಗುಂಪೇ ಅಯ್ಯೋ ನೀವು ಫೇಸ್ಬುಕ್ ಅಲ್ಲಿ ಇಲ್ಲವಾ ? ಎನ್ನುವ ಉದ್ಗಾರ ಮೇಲು ದನಿಯಲ್ಲಿ ತೇಲಿಸಿಬಿಡುತ್ತದೆ. ಈಗ ಪ್ರತಿಯೊಂದಕ್ಕೂ ಗೂಗಲ್ ಅನ್ನೇ ನಂಬಿಕೊಂಡಾಗಿದೆ. ಮಕ್ಕಳ ಆಟಿಕೆಯಿಂದಿಡಿದು ಮುದುಕರ ಊರುಗೋಲನ್ನು ಹುಡುಕಲು ಮತ್ತು ಕೊಳ್ಳಲು ಸಹ ಗೂಗಲ್ ಅನ್ನು ಬಳಸುವಂತಾಗಿದೆ. ಆದರೆ ನಾವು ಎಷ್ಟೇ ಮುಂದುವರೆದು ಎಲ್ಲವನ್ನು ಬೆರಳತುದಿಗೆ ತಂದುಕೊಂಡರೂ ಭಾವನೆಗಳನ್ನು ಮಾತ್ರ ಗೂಗಲ್ನಲ್ಲಿ ಅಥವಾ ಇನ್ನುಯಾವುದೋ ಸಾಮಾಜಿಕ ಜಾಲತಾಣದಲ್ಲಿ ಹುಡುಕಲು ಆಗುವುದಿಲ್ಲ ಭಾವನೆಗಳು ಇಂಟರ್ನೆಟ್ ನಲ್ಲಿ ಸಿಗುವುದಿಲ್ಲ.
ಇಂಟರ್ನೆಟ್ನಲ್ಲಿ ಯಾರೋ ಲಾಂಗ್ ಡ್ರೈವ್ ಹೋಗಿ ಖುಷಿಪಟ್ಟಾಗ ಸೆರೆಹಿಡಿದ ಫೋಟೋಗಳನ್ನು ನೋಡಬಹುದು, ಗೆಳತಿಯೊಬ್ಬಳು ಮೆಹೆಂದಿ ಹಚ್ಚಿ ಸಂಭ್ರಮಿಸಿದ ಕ್ಷಣಗಳ ಫೋಟೋಗಳನ್ನ ನೋಡಬಹುದು ಇನ್ನ್ಯಾರೋ ಗೆಳೆಯ ಕುರಿಮರಿಯನ್ನ ಹೆಗಲಮೇಲೇರಿಸಿ ಕುಣಿದು ಕುಪ್ಪಳಿಸಿದ ಕ್ಷಣಗಳನ್ನ ನೋಡಬಹುದೇ ವಿನಃ ಅವರು ಅನುಭವಿಸಿದ ಆನಂದ ಪುಳಕ ಮತ್ತು ಕಚಗುಳಿಯನ್ನು ಅನುಭವಿಸಲಿಕ್ಕೆ ಸಾಧ್ಯವಿಲ್ಲ
ಚಿಕ್ಕವಯಸ್ಸಿನಿಂದ ನಾನು ಮೆಹೆಂದಿ ಹಾಕಿದ್ದೆ ಇಲ್ಲ , ಮೊದಲಬಾರಿ ನನ್ನ ಮದುವೆಗೆಂದು ತರಾತುರಿಯಲ್ಲಿ ಜಯನಗರದ ಕಾಂಪ್ಲೆಕ್ಸ್ ಮುಂದೆ ಮೆಹೆಂದಿ ಹಾಕಲೆಂದೇ ಇರುವ ರಾಜಸ್ಥಾನಿ ಅಣ್ಣನಿಗೆ ಒಂದು ಡಿಸೈನ್ ಸೆಲೆಕ್ಟ್ ಮಾಡಲು ಗಂಟೆಗಟ್ಟಲೆ ತಲೆತಿಂದು ಹಾಕಿಸಿಕೊಂಡಿದ್ದಷ್ಟೇ ನೆನಪು, ಆಮೇಲೆ  ಗೆಳತಿಯರ ಹಿಂಡು ಮದುವೆ ಮತ್ತಿತರ ಸಮಾರಂಭಗಳಲ್ಲಿ ಮೆಹೆಂದಿ ಹಾಕಿಸಿಕೊಳ್ಳುವಾಗ ದೂರವೇ ನಿಂತು ನೋಡುತ್ತಿದ್ದೆ ಅವರು ಹಾಕಿಕೊಳ್ಳುವ ಡಿಸೈನ್ಗಳನ್ನು ನೋಡಿ ಇದೆಲ್ಲ ಇಂಟರ್ನೆಟ್ ಅಲ್ಲಿ ಕಾಣಸಿಗುತ್ತದೆ ಇದರಲ್ಲೇನು ಹೊಸತಿಲ್ಲ ಎಂದುಕೊಳ್ಳುತ್ತಿದ್ದೆ ಆದರೆ ಹಾಕಿಕೊಳ್ಳುವಾಗಿನ ಸಂಭ್ರಮ ನನ್ನ ಸೋಕಲೆ ಇಲ್ಲ.
ಮೊನ್ನೆ ಗೆಳತಿ ಶ್ವೇತಾ ಈ ವಾರಾಂತ್ಯದಲ್ಲಿ ನಾನು ಎಲ್ಲಿಗೂ ಆಚೆ ಸುತ್ತಲೂ ಹೋಗುತ್ತಿಲ್ಲ ಮನೆಯಲ್ಲೇ ಕುಳಿತು ಮೆಹೆಂದಿ ಹಾಕಿಕೊಳ್ಳುತ್ತೇನೆ ನೀನು ಸಹ ಹಾಕಿಕೋ ಚೆನ್ನಾಗಿರುತ್ತದೆ ಎಂದಾಗ ನಾನು ಕೂಡ ಫ್ರೀ ಇರುವೆ ಆದ್ದರಿಂದ ನಾನು ಕೂಡ ಮೆಹೆಂದಿಯನ್ನು ಹಚ್ಚಿಕೊಳ್ಳುವೆ ಎಂದು ಅವಳಿಗೆ ಮಾತು ಕೊಟ್ಟು ಬಳೆ ಅಂಗಡಿಗೆ ಹೋಗಿ ಅಲ್ಲಿದ್ದ ಹುಡುಗ ಕೊಟ್ಟ ಯಾವುದೋ ಕಂಪನಿಯ ಮೆಹೆಂದಿ ಕೋನ್ ತಂದು ಹಚ್ಚಲು ಕುಳಿತೆ.  ಇಂಟರ್ನೆಟ್ನಿಂದಲೇ ಡಿಸೈನ್ ಹುಡುಕಿ ನಿಧಾನವಾಗಿ ಕೈಗೆ ಒಂದೊಂದೇ ಎಳೆ ಬಿಡುವಾಗ ಮೆಹೆಂದಿ ಕೋನಿನ ತುದಿ ತುಸು ಮೃದುವಾಗಿ ಚುಚ್ಚುವಾಗ, ತಣ್ಣಗಿನ ಮೆಹೆಂದಿ ಕೈಸೇರುವಾಗ ಅದೇನೋ ಪುಳಕ ಯಾರೋ ಕಚಗುಳಿಯಿಟ್ಟ ಅನುಭವ. ಆ ಚಿತ್ತಾರ ಕೈಮೇಲೆ ಮೂಡಿದಾಗ ಅದನೊಮ್ಮೆ ಕಣ್ಣತುಂಬ ನೋಡುವಾಗ ಸಿಗುವ ಸಂತೋಷ ಬೇರೆಲ್ಲೂ ಇಲ್ಲ ಎನಿಸಿಬಿಟ್ಟಿತು. ನನ್ನ ಕೈಯನ್ನು ನಾನೇ ದಿಟ್ಟಿಸಿ ಕಣ್ಣಲ್ಲೇ ಧೃಷ್ಠಿ ತೆಗೆದು, ಪತಿರಾಯರನ್ನ ಕಾಡಿ ಬೇಡಿ ಒಂದು ಫೋಟೋ ತೆಗೆಸಿಕೊಂಡು ಶ್ವೇತಾಳಿಗೆ ಕಳಿಸಿ ಇಂತಹ ಸಂತೋಷಕ್ಕೆ ಕಾರಣಳಾದ ಅವಳಿಗೆ ಮನದಲ್ಲೇ ಕೃತಜ್ಞತೆ ಹೇಳಿದೆ.
ಗೆಳೆಯ ಮಂಜು ಯಾವಾಗ ಮನೆಗೆ ಬಂದರು ಲಾಂಗ್ ಡ್ರೈವ್ ಬಗ್ಗೆ ಒಂದು ಮಾತು ಇದ್ದೆ ಇರುತ್ತದೆ. ತಿಂಗಳಿಗೊಮ್ಮೆಯಾದರೂ ಒಂದು ಲಾಂಗ್ ಡ್ರೈವ್ ನ ಪೋಸ್ಟ್ ಫೇಸ್ ಬುಕ್ ನಲ್ಲಿ ಹಾಕುತ್ತಾನೆ ಇದನೆಲ್ಲ ನೋಡುತ್ತಿದ್ದ ನಾನು ಇವನು ಸುಮ್ಮನೆ ಕೆಲಸ ಕಾರ್ಯ ಇಲ್ಲದೆ ಪೆಟ್ರೋಲ್ ಉರಿಸಿಕೊಂಡು ಸಮಯ ಮತ್ತು ದುಡ್ಡನ್ನ ಹಾಳುಮಾಡುತ್ತಾನೆ ಎಂದುಕೊಳ್ಳುತ್ತಿದ್ದೆ.
ಮೊನ್ನೆ ನಾವು ಅಚಾನಕ್ಕಾಗಿ ಕೆಂಗೇರಿಯಲ್ಲಿರುವ ಗೆಳೆಯನ ಮನೆಗೆ ಹೋಗಬೇಕಾಗಿ ಬಂದಾಗ ಎಲೆಕ್ಟ್ರಾನಿಕ್ ಸಿಟಿಯಿಂದ ನೈಸ್ ರೋಡ್ ಮೇಲೆ ಹೋಗುವುದು ಎಂದು ನಿರ್ಧರಿಸಿ ಹೊರಟೆವು. ನಾವು ಹೊರಟಾಗ ಆಕಾಶದ ತುಂಬಾ ಕಪ್ಪು ಮೋಡಗಳ ಗೂಡುಗಳೇ ತುಂಬಿಕೊಂಡು, ಮೋಡಗಳೆಲ್ಲ ಕೈ ಚಾಚಿ ಸೂರ್ಯನ ಕಣ್ಣನ್ನ ಮುಚ್ಚಿಕೊಂಡಂತೆ ಭಾಸವಾಗುತ್ತಿತ್ತು. ನಾವು ಸ್ವಲ್ಪ ದೂರ ಸರಿದಿರಬೇಕು ಅಷ್ಟರಲ್ಲಿ ತುಂತುರು ಹನಿಯಲು ಶುರುವಾಯಿತು. ಒಂದೊಂದೇ ಹನಿಗಳು ಪಟಪಟ ಎಂದು ಸದ್ದುಮಾಡುತ್ತಾ ಭುವಿಗೆ ಮುತ್ತಿಡುತ್ತಿದ್ದವು. ರಸ್ತೆಯ ಅಕ್ಕ ಪಕ್ಕದಲ್ಲಿ ಮತ್ತು ಅಲ್ಪ ಸ್ವಲ್ಪ ದೂರದಲ್ಲೇ ಇದ್ದ ತೋಟದಲ್ಲಿದ್ದ ಗಿಡಮರಗಳು ನಮಗೆ ಬೈ ಹೇಳಿ ಹಿಂದೆ ಸರಿದು ನಮ್ಮನ್ನ ಬೀಳ್ಕೊಡುತ್ತಿದ್ದವು. ದೂರ ಎಲ್ಲೋ ನಿಂತಿದ್ದ ಗುಡ್ಡಗಳು ನಮ್ಮನ್ನ ಕೈ ಚಾಚಿ ಕರೆಯುತ್ತಿದ್ದವು. ನಾವುಗಳು ಎಲ್ಲೋ ಕಾಣದ ಲೋಕದಲ್ಲಿ ಪುಷ್ಪಕ ವಿಮಾನದಲ್ಲಿ ತೇಲಿದಂತೆ ಅನುಭವವಾಗುತ್ತಿತ್ತು ಆದರೆ ಬರ್ರೆಂದು ಓಡಾಡುವ ವಾಹನಗಳು ಮಾತ್ರ ನಮ್ಮನ್ನು ವಾಸ್ತವಕೆ ಕರೆದುಕೊಂಡು ಬಿಡುತ್ತಿದ್ದವು. ಅಲ್ಲಲ್ಲಿ ಕಾಣುತ್ತಿದ್ದ ನಾಮಫಲಕಗಳು ನಾವು ಸ್ನೇಹಿತನ ಮನೆಸೇರುವುದನ್ನು ನೆನಪಿಸುತ್ತಿದ್ದವು. ನೈಸ್ ರೋಡ್ ಇಂದ ಕೆಂಗೇರಿ ರೋಡಿಗೆ ಸೇರುವವರೆಗೂ ಮನಸು ಹಗುರಾಗಿ ಯಾವುದೇ ಆಲೋಚನೆಗಳಿಲ್ಲದೆ ಮಳೆಯ ಕಚಗುಳಿಗೆ, ತೀಡುವ ತಂಗಾಳಿ ಸ್ಪರ್ಶಕೆ ಮನಸು ಕುಣಿಯುವಾಗ ಮಂಜುವಿನ ಲಾಂಗ್ ಡ್ರೈವ್ ನ ಪುಳಕ ಅರ್ಥವಾಯಿತು.
ಭಾವನೆಗಳು ಇಂಟರ್ನೆಟ್ ನಲ್ಲಿ ಹುದುಗಿಲ್ಲ ಗೂಗಲ್ ನಲ್ಲಿ ಹುಡುಕಿದರೆ ಸಿಗುವುದಿಲ್ಲ, ಫೇಸ್ಬುಕ್ನಲ್ಲಿ ನೋಡುವ ಫೋಟೋಗಳಿಂದ ವಿಡಿಯೋಗಳಿಂದ ಖುಷಿ ಸಿಗುವುದಿಲ್ಲ. ವಾಸ್ತವದಲ್ಲಿ ಅನುಭವಿಸಿದರೆ ಮಾತ್ರ ಭಾವನೆಗಳ ನವಿರುಭಾವದ ಸವಿ ಸ್ಪರ್ಶ ಸಿಗುತ್ತದೆ ಎಂದು ನಾ ಸ್ವತಃ ಮೆಹೆಂದಿ ಹಚ್ಚಿದಾಗ ಮತ್ತು ನೈಸ್ ರೋಡ್ ಅಲ್ಲಿ ಪ್ರಯಾಣಿಸಿದಾಗ ಸಿಕ್ಕ ಕಚಗುಳಿಯಿಂದ ಅರಿವಾಯಿತು