Sunday, 31 March 2013

31/3/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಲೇಖನ "ಮುದ್ದಿಸುವ ಪೋಷಕರು ಮುಪ್ಪಾದ ಮೇಲೇಕೆ ಬೇಡ ".


ಅಪ್ಪ ಅಮ್ಮ ನಮ್ಮ ಕಣ್ಣ ಮುಂದಿರುವ ದೇವರುಗಳು. ಕೂಸು ಕಣ್ಣ ಬಿಡುವ ಮುನ್ನವೇ ಸಾವಿರಾರು ಕನಸು ಕಟ್ಟಿ ತನ್ನ ಮಕ್ಕಳಿಗೆ ಪ್ರಪಂಚದ ಎಲ್ಲಾ ಸುಖ ಸವಲತ್ತುಗಳನ್ನು ಕಲ್ಪಿಸಬೇಕೆಂದು ಜವಾಬ್ದಾರಿಗಳ ಸರಮಾಲೆಗೆ ಹೆಗಲು ಕೊಟ್ಟ ತಂದೆ, ನವ ಮಾಸ ತನ್ನೊಳಗೆ ಅಡವಿಟ್ಟು ಎಲ್ಲ ನೋವ ಸಹಿಸಿ ತಮ್ಮೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ತನ್ನ ಒಡಲಕುಡಿಯನ್ನು ಭೂಮಿಗೆ ತರುವ ತಾಯಿ, ಎರಡು ಜೀವಗಳನ್ನು ಬಣ್ಣಿಸಲು ಪದಗಳೇ ಉಳಿದಿಲ್ಲ.

ತಮ್ಮೆಲ್ಲಾ ಆಸೆಗಳ ಬದಿಗಿಟ್ಟು ಕಷ್ಟಗಳ ನುಂಗಿಕೊಂಡು ಮಕ್ಕಳಿಗೆ ಬೇಕ್ಕಾದ್ದನ್ನೆಲ್ಲಾ ಮಾಡುತ್ತಾರೆ. ತಾವು ತಿನ್ನುವ ತುತ್ತನ್ನ ನಮ್ಮ ಮಕ್ಕಳು ತಿಂದರೆ ಚನ್ನಾಗಿರುತ್ತದಲ್ಲಾ ಎಂದು ಮಕ್ಕಳ ಬಾಯಿಗಿಡುತ್ತಾರೆ. ಏನೇ ತೆಗೆದುಕೊಳ್ಳಬೇಕಾದರೂ ತಂದೆ ತಾಯಿಗಳು ಮಕ್ಕಳಿಗೆ ಬೇಕಾದ್ದನ್ನು ಕೊಂಡು ನಂತರ ಅವರಿಗೆ ಬೇಕಾದ್ದನ್ನು ಕೊಳ್ಳುತ್ತಾರೆ. ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಅವರಿಗೆ ಅವರ ಬಾಲ್ಯದಲ್ಲಿ ಸಿಗದ ಎಲ್ಲವನ್ನು ಮಕ್ಕಳಿಗೆ ಮಾಡುತ್ತಾರೆ. ನಾವು ಸಾಧಿಸಲಾಗದ್ದನ್ನು ನಮ್ಮ ಮಕ್ಕಳಾದರೂ ಸಾಧಿಸಲಿ ಎಂದು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ.
ಶಾಲೆಗೆ ಕಳುಹಿಸುವಾಗ ತಮ್ಮ ಆರ್ಥಿಕ ಸ್ಥಿತಿಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಶಾಲೆಯನ್ನೇ ಆರಿಸಿ ಕಳುಹಿಸುತ್ತಾರೆ. ತಮಗೆ ಏನೇ ತೊಂದರೆ ಇದ್ದರೂ ಮಕ್ಕಳಿಗೆ ಮಾತ್ರ ಏನೂ ಕಡಿಮೆ ಮಾಡದೆ ಎಲ್ಲವನ್ನು ಕೊಡಿಸುತ್ತಾರೆ.

ಕಾಲೇಜು ಮೆಟ್ಟಿಲೇರುವಾಗ ಮಕ್ಕಳ ಇಷ್ಟದ ಕಾಲೇಜಿಗೆ ಸಾಲವನ್ನಾದರೂ ಮಾಡಿ ಸೇರಿಸುತ್ತಾರೆ. ಕೆಲವೊಮ್ಮೆ ಎಲ್ಲೂ ಹಣ ಸಿಗದಿದ್ದಾಗ ತಾಯಿ ತನ್ನ ಮೈಮೇಲಿನ ವಡವೆಗಳನ್ನು ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗೆ ಜೀವನದ ಪ್ರತಿ ಹಂತದಲ್ಲೂ ಮಕ್ಕಳ ಬಗ್ಗೆ ಯೋಚಿಸುತ್ತಾ ಅವರ ಏಳಿಗೆಗಾಗಿ ಅವರ ಒಳಿತಿಗಾಗಿ ಶ್ರಮಿಸುತ್ತಾ ಬರುತ್ತಾರೆ. ಕಷ್ಟದಲ್ಲೇ ನಲಿವು ಕಾಣುತ್ತಾರೆ. ಮಕ್ಕಳ ಸಂತೋಷದಲ್ಲೇ ತೃಪ್ತಿ ಪಡುತ್ತಾರೆ.

ಕಷ್ಟಪಟ್ಟು ಹೊಟ್ಟೆಕಟ್ಟಿ ಓದಿಸಿ ದೊಡ್ಡವರನ್ನಾಗಿ ಮಾಡಿ, ನೋವ ಮರೆತು ನಲಿವನು ಅರಸಿ, ಮಾಡಿದ ಶ್ರಮ ಸಾರ್ಥಕವಾಗಿದೆ, ಮಕ್ಕಳಿಗೆ ಕೆಲಸ ಸಿಕ್ಕಿದೆ, ಕಾಲಕ್ಕೆ ಸರಿಯಾಗಿ ಮದುವೆ ಮಾಡಿ ಮೊಮ್ಮಕ್ಕಳ ಆಗಮನದ ಕನಸ ಕಾಣುತ್ತಾ ಮೊಮ್ಮಕ್ಕಳಿಗೆ ತಮ್ಮಿಂದ ಕೊಡಬಹುದಾದ ಖುಷಿ, ಮೊಮ್ಮಕ್ಕಳ್ಳೊ೦ದಿಗಿನ  ಆಟ ಪಾಠಗಳ ಬಗ್ಗೆ ಎಣಿಸುತ್ತಾ, ಗುಣಿಸುತ್ತಾ ಕಾಲ ಕಳೆಯಬೇಕಾದರೆ ತಮ್ಮ ಮುದ್ದಿನ ಮಕ್ಕಳಿಂದ ಸೊಸೆಯರಿಂದ ಸಿಡಿಲಿನಂತ ಸುದ್ದಿಯನ್ನು ಕೇಳುತ್ತಾರೆ. ಅದು ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸುವ ವಿಚಾರ. ಅಪ್ಪ ಅಮ್ಮಂದಿರನ್ನು ಮಕ್ಕಳಿಂದ ದೂರವಿರಿಸುವ ವಿಚಾರ.ಇಷ್ಟು ದಿನ ಕಣ್ಣ ಮುಂದೆ ಮಕ್ಕಳ ಸುಖ ಸಂತೋಷ, ದುಃಖ ದುಮ್ಮಾನಗಳನ್ನು ಕಣ್ಣಲ್ಲಿ ಕಣ್ಣಿಟ್ಟು, ಮಕ್ಕಳ ಪ್ರತಿ ಹೆಜ್ಜೆಯಲ್ಲಿಯೂ ನಿಲುವಾಗಿ ನಿಂತ ಪೋಷಕರಿಗೆ ಇದು ನುಂಗಲಾರದ ತುತ್ತೇ ಸರಿ. ಆದರೂ ಎಷ್ಟೇ ಕಷ್ಟವೆನಿಸಿದರೂ, ಎಷ್ಟೇ ನೋವೆನಿಸಿದರೂ ಮರು ಮಾತಾಡದೆ ಮರು ಪ್ರಶ್ನಿಸದೆ ಮಕ್ಕಳ ಸಂತೋಷಕ್ಕಾಗಿ ಇಳಿವಯಸ್ಸಿನಲ್ಲಿ ಅಪ್ಪ ಅಮ್ಮ ವೃದ್ದಾಶ್ರಮ ಸೇರುತ್ತಾರೆ.

ಮೊದಮೊದಲು ವಾರಕ್ಕೊಮ್ಮೆ ಭೇಟಿ ಮಾಡುವ ಮಕ್ಕಳು, ಆಮೇಲೆ ತಿಂಗಳಿಗೊಮ್ಮೆ ಭೇಟಿ ಮಾಡುತ್ತಾರೆ. ಕಾಲ ಕಳೆದಂತೆ ತಮಗೆ ಅಪ್ಪ ಅಮ್ಮ ಎಂಬ ಎರಡು ಜೀವಗಳಿವೆ ಎಂಬುದನ್ನು ಎಷ್ಟೋ ಜನ ಮರೆತೇ ಬಿಡುತ್ತಾರೆ. ಕಣ್ಣ ಮುಂದಿದ್ದರೂ, ಕಣ್ಣ ಮರೆಯಲ್ಲಿದ್ದರೂ ಸದಾ ಮಕ್ಕಳು ಮೊಮ್ಮಕ್ಕಳ ಬಗ್ಗೆ ಯೋಚಿಸುತ್ತಾ, ಮಕ್ಕಳ ಬರುವಿಕೆಗಾಗಿ ಕಾಯುತ್ತಾ, ಕೊರಗುತ್ತಾ ಇಳಿಜೀವಗಳು ಜೀವನ ದೂಡುತ್ತಾರೆ.

ಇಷ್ಟೆಲ್ಲಾ ಆಗುತ್ತಿರುವುದು ಪಾಶ್ಚ್ಯಾತ್ಯ ಸಂಸ್ಕೃತಿಯ ಕರಿ ನೆರಳಿನಿಂದಾಗಿ. ಪಕ್ಕಕ್ಕೆ ಹೆಂಡತಿ ಬಂದೊಡನೆ ಅಪ್ಪ ಅಮ್ಮಂದಿರ ನೆರಳು ಬೇಡವೆನಿಸಿ, ಅವರು ಮಾಡಿದ ತ್ಯಾಗ ಶ್ರಮಗಳ ಗಾಳಿಗೆ ತೂರಿ, ಹೆಂಡತಿಯ ಕೈಗೆ ಬುದ್ದಿ ಕೊಟ್ಟು ಹೆಂಡತಿ ಹಾಕಿದ ತಾಳಕ್ಕೆ ಕುಣಿಯುತ್ತಾ, ತಾನು , ತನ್ನ ಹೆಂಡತಿ, ತನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸುವ ಕೆಟ್ಟ ಗುಣದಿಂದಾಗಿ.

ಇಂದು ಪಾಶ್ಚ್ಯಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ಜನರು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಲೆಕ್ಕಿಸದೆ ಸಂಬಂದಗಳ ಬೆಲೆ ಮತ್ತು ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳಿಂದ ನಾವು ನಮ್ಮವರು ಎಂಬ ಭಾವನೆಯನ್ನು ಮರೆಯುತ್ತಿದ್ದಾರೆ. ಎಲ್ಲವುದಕ್ಕಿಂತ ಹೆಚ್ಚಾಗಿ ಹಿರಿ ಜೀವಗಳ ಮೇಲಿನ ಪ್ರೀತಿ ಗೌರವ ಹೊರಟು ಹೋಗಿ ಅವರ ಸೇವೆ ನಾವೇಕೆ ಮಾಡಬೇಕು ಎಂದೆಣಿಸಿ ವೃದ್ದಾಶ್ರಮಗಳತ್ತ ಕಣ್ಣು ಹಾಯಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ  ವೃದ್ದಾಶ್ರಮಗಳು  ಬೀದಿಗೊಂದು ತಲೆ ಎತ್ತುತ್ತಿವೆ.

ವೃದ್ದಾಶ್ರಮಕ್ಕೆ ಬಿಟ್ಟರೂ ವಾಸಿ ಕೆಲವು ಪುಣ್ಯಾತ್ಮರು ಜನ್ಮ ಕೊಟ್ಟ ಜೀವಗಳನ್ನು ನಿನ್ನೆ ಮೊನ್ನೆ ಬಂದ ಹೆಂಡತಿಯ ಮಾತು ಕೇಳಿ ಇತ್ತ ಮನೆಯಲ್ಲಿಯೂ ಇರಿಸಿಕೊಳ್ಳದೆ ಅತ್ತ ಆಶ್ರಮಕ್ಕೂ ಬಿಡದೆ ಮನೆಯಿಂದ ಹೊರದೂಡುತ್ತಾರೆ. ಕೈಯಲ್ಲಿ  ಶಕ್ತಿ ಇರುವಾಗ ಮಕ್ಕಳಿಗಾಗಿ ದುಡಿದ ಜೀವಗಳು ತಮಗಾಗಿ ಏನೂ ಮಾಡಿಕೊಳ್ಳದ ಪರಿಣಾಮ ಅಕ್ಷರಸಹ  ಬೀದಿಗೆ ಬೀಳುತ್ತಾರೆ. ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಾರೆ
ಹೀಗೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಿದ ಮಕ್ಕಳಿಗೆ ಹಿಡಿ ಶಾಪ ಕೂಡ ಹಾಕದೆ ದೇವರು ಕೊಟ್ಟ  ಜೀವವನ್ನು ಅವನೇ ತೆಗೆದುಕೊಂಡು ಹೋಗಲೆಂದು ಜೀವನ ಸಾಗಿಸುತ್ತಾರೆ.

ಮುದ್ದು ಮಾಡಿ, ನೆಲಕ್ಕೆ ಬಿಟ್ಟರೆ ಮಾಸಿಹೋಗುತ್ತಾರೆ  ಎಂದು ಅಂಗೈಯಲ್ಲಿಟ್ಟು  ಲಾಲಿಸಿ ಪಾಲಿಸಿದ ಪೋಷಕರು ಮುಪ್ಪಾದ ಮೇಲೇಕೆ ಬೇಡವೆನಿಸುತ್ತಾರೆ...? ಪ್ರತಿ ಹೆಜ್ಜೆಯಲ್ಲೂ ಊರುಗೋಲಂತಿದ್ದವರನ್ನು ನಡೆಯಲು ಬಂದಾಕ್ಷಣ ಊರುಗೋಲನ್ನು ಬಿಸಾಡುವಂತೆ ಬೀದಿಗೆ ತಳ್ಳುವರೇಕೆ ...? ಎಷ್ಟಿದ್ದರೇನು  ಏನಿದ್ದರೇನು  ತಂದೆ ತಾಯಿಯ ಋಣವ ತೀರಿಸಲಾಗುವುದೇ...? ಅವರು ಮಾಡಿದ ತ್ಯಾಗಕ್ಕೆ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗುವುದೇ....?

ಕಾಲ ಚಕ್ರ ಎಂದೂ ನಿಲ್ಲುವುದಿಲ್ಲ ಸದಾ ಸುತ್ತುತ್ತಲೇ ಇರುತ್ತದೆ. "ಮಾಡಿದ್ದುಣ್ಣೋ  ಮಹರಾಯ" ಎಂಬ ಗಾದೆ ಮಾತಿನಂತೆ ನಾವುಗಳು ನಮ್ಮ ಅಪ್ಪ ಅಮ್ಮಂದಿರಿಗೆ ಮಾಡಿದ ರೀತಿಯನ್ನು ನೋಡಿ ಬೆಳೆದ ನಮ್ಮ ಮಕ್ಕಳು ನಮಗೂ ಅದೇ ರೀತಿ ಮಾಡುತ್ತಾರೆ ನಾವು ನಮ್ಮ ಅಪ್ಪ ಅಮ್ಮಂದಿರನ್ನು ಸೇರಿಸಿದ ವೃದ್ದಾಶ್ರಮದಲ್ಲೇ ನಮಗೂ ಒಂದು ಸೀಟನ್ನು ಕಾದಿರಿಸುತ್ತಾರೆ. ನಾವು ತಳ್ಳಿದ ಬೀದಿಯಲ್ಲಿ ನಮಗೂ ಒಂದು ಪುಟ್ ಪಾತಿನ ಮೂಲೆಯನ್ನು ಕಾದಿರಿಸುತ್ತಾರೆ.

ಇಷ್ಟೆಲ್ಲಾ ಅನಾಹುತಗಳಿಗೆ ಎಡೆ ಮಾಡಿಕೊಡದೆ ಎಷ್ಟೇ ತಿಳಿದಿದ್ದರೂ, ಏನೆಲ್ಲಾ ಸಾಧಿಸಿದ್ದರೂ, ಜಗತ್ತನ್ನೆಲ್ಲಾ ಸುತ್ತಿದ್ದರೂ  ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರು ಹೋಗದೆ, ಕಲ್ಲು ದೇವರ ಪೂಜಿಸದೆ, ನಮ್ಮ ತಂದೆ ತಾಯಿಯರ ಪೂಜಿಸಿ, ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪಾಲಿಸಿ, ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಸಂಸ್ಕಾರ ಕೊಟ್ಟು ಜೀವನದ ಮೌಲ್ಯಗಳನ್ನು ಕಟ್ಟಿ ಕೊಟ್ಟು ಸ್ವಾಸ್ಥ್ಯ ಸಮಾಜವ ನಿರ್ಮಿಸಲು ಮುಂದಾಗೋಣ.

                                         ಇಂತಿ,
                                                 ಕವಿತಾಗೌಡ


No comments:

Post a Comment