Thursday 7 March 2013

ಹೆಣ್ಣೆಂದರೆ ಎಷ್ಟು ಚಂದ ಅಲ್ಲವೇ...



ಹೆಣ್ಣು ಎಂಬ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸಿಗೆ ಎಷ್ಟು ಉಲ್ಲಾಸವಾಗುತ್ತದೆ ಅಲ್ಲವೇ. ಹೆಣ್ಣು ಜಗತ್ತಿನ ಸೃಷ್ಟಿಯ ಮೂಲ.
ಭೂತಾಯಿ ಹೆಣ್ಣು, ಭಾರತಾಂಬೆ ಹೆಣ್ಣು, ಕನ್ನಡಾಂಬೆ ಹೆಣ್ಣು, ಸಕಲ ಜೀವ ಚರಾಚರಗಳ ಕಾಯುವ ದೇವಿಮಾತೆ ಹೆಣ್ಣು. ನಮ್ಮ ಮನೆ ಮಗಳು ಹೆಣ್ಣು, ಮನೆ ಬೆಳಗೊ ನಂದಾದೀಪ ಹೆಣ್ಣು, ಮನೆಯ ಆಧಾರ ಸ್ತಂಭ ತಾಯಿ ಹೆಣ್ಣು.

ಸಹನಾಮಯಿ, ಕರುಣಾಮಯಿ, ತ್ಯಾಗಮಯಿ ಹೀಗೆ ಹೆಣ್ಣಿಗೆ ನಾನಾ ಬಿರುದುಗಳಿವೆ. ಎಲ್ಲಾ ಬಿರುದುಗಳಿಗೆ ಕಾರಣ ಅವಳ ನಡೆನುಡಿ, ಆವಾಭಾವ, ಬೇರೆಯವರನ್ನ ಉದ್ದರಿಸುವ, ಸತ್ಕರಿಸುವ ಮನಸ್ಸಿನಿಂದಾಗಿ.

ಹೆಣ್ಣನ್ನು ಹೊಗಳದ ಲೇಖಕನಿಲ್ಲ, ಹೆಣ್ಣನ್ನು ಬಣ್ಣಿಸದ ಕವಿಯಿಲ್ಲ, ಹೆಣ್ಣನ್ನು ವರ್ಣಿಸದ ಪದಗಳಿಲ್ಲ.

ಹೆಣ್ಣು ರೂಪವತಿ, ಜಗದ ಸೌಂದರ್ಯವನೆಲ್ಲ ತನ್ನ ಸೆರಗಿನಲ್ಲೆ ಕಟ್ಟಿಕೊಂಡಿರುವ ಸೌಂದರ್ಯವತಿ, ಧೈರ್ಯವಂತೆ, ಬುದ್ದಿವಂತೆ ಹಾಗೆ ಜಾಣೆ ಕೂಡ.

ಇಂತಹ ಹೆಣ್ಣು ಹುಟ್ಟಿದಾಗಿನಿಂದ ಸಾಯುವವರೆಗೆ ತನ್ನ ನಾನಾ ಜವಬ್ದಾರಿಗಳನ್ನ ಹೆಗಲ ಮೇಲೆ ಹೊತ್ತು, ಕಾಲಕಾಲಕ್ಕೆ ತನ್ನನ್ನು ತಾನು ಬದಲಾಯಿಸಿಕೊಂಡು, ತನ್ನಿಂದ ಆಗಬಹುದಾದಂತಹ ಎಲ್ಲಾ ಕೊಡುಗೆಗಳನ್ನು ತನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ನೀಡುತ್ತಾ ಬಂದಿದ್ದಾಳೆ.


ಮಗಳಾಗಿ ಅಪ್ಪ ಅಮ್ಮನ ಮುದ್ದಿನ ಕೂಸಾಗಿ, ಜಗದ ಎಲ್ಲಾ ಸುಖವನ್ನು ತಂದುಕೊಟ್ಟು ಬೆಟ್ಟದಷ್ಟು ಕನಸುಗಳನ್ನು ಕಟ್ಟಿಕೊಡುತ್ತಾಳೆ. ಹುಟ್ಟಿದಾಕ್ಷಣ  ಜವಾಬ್ದಾರಿಗಳ ಸರಮಾಲೆಯನ್ನೇ ತಂದು ಹಾಕುತ್ತಾಳೆ.

ಒಬ್ಬ ಗಂಡನಾದವನು ಹೆಂಡತಿಯಿಂದ ಕಲಿಯದ್ದನ್ನು, ತನ್ನ ತಾಯಿಯಿಂದ ಕಲಿಯಲಾಗದ್ದನ್ನು ತನ್ನ ಮಗಳಿಂದ ಕಲಿಯುತ್ತಾನೆ. ಗಂಡಿನ ಜೀವನ ಸಾರ್ಥಕವಾಗುವುದು ಅವನು ಅಪ್ಪನಾದಮೇಲೆ ಮಾತ್ರ.

ಮಗು ಅಪ್ಪನೆಡೆಗೆ ದೃಷ್ಟಿ ನೆಟ್ಟು  ನೀನೇ ನನ್ನ ಜನುಮದಾತ ಅನ್ನುವ ಭಾವದಿ ನೋಡುವಾಗ ತಂದೆಯಾದವನಿಗೆ ಎಲ್ಲಿಲ್ಲದ ಖುಷಿ ತಂದು, ಮೇಲಿರುವ ಸ್ವರ್ಗ ಕಣ್ಣಮುಂದೆ ಬಂದಂತೆ ಮಾಡುತ್ತಾಳೆ.

ತೊದಲು ನುಡಿಯುವಾಗ, ಅಂಬೆಗಾಲಿಡುವಾಗ ಅಪ್ಪನ ಅಣಕಿಸಿ ಹುಸಿ ಕೋಪ ತೋರುವಾಗ ತನ್ನ ತಂದೆಯ ಜೀವನವನ್ನ ಸಾರ್ಥಕತೆಯ ಕಡೆಗೆ ಕದ್ದೊಯ್ಯುತ್ತಾಳೆ.


ತಂಗಿಯಾಗಿ ಅಣ್ಣನ ಗೋಳಾಡಿಸುತ್ತಾಳೆ, ಪೀಡಿಸುತ್ತಾಳೆ. ಅವನ ಆಟ ಪಾಠಗಳಲ್ಲಿ ಜೊತೆಯಾಗುತ್ತಾಳೆ.
ಜಗಳವಾಡುವಾಗ ಪರಚಿ ಕಚ್ಚಿ ಗಾಯವಾಗಿಸಿ ಬಾಲ್ಯದ ಸವಿ ಸವಿ ನೆನಪುಗಳನ್ನು ಅಣ್ಣನಿಗೆ ಉಡುಗೊರೆಯಾಗಿ ನೀಡುತ್ತಾಳೆ. ಒಂದು ಹಂತಕ್ಕೆ ಬಂದಾಗ ಅಣ್ಣನಿಗೂ ಕೂಡ ಅಪ್ಪನಿಗೆ ಕೊಟ್ಟಂತಹ ಜವಾಬ್ದಾರಿಗಳನ್ನು ಹೆಗಲೇರಿಸುತ್ತಾಳೆ.
ಮುಂದ್ದೊಂದು ದಿನ ಮದುವೆಯಾಗಿ ಗಂಡನ ಮುದ್ದು ಮಡದಿಯಾಗಿ, ಅವನ ಬೆನ್ನೆಲುಬಾಗಿ ನಿಲ್ಲುತ್ತಾಳೆ.
ಅವನ ಎಲ್ಲಾ ಜವಾಬ್ದಾರಿಗಳನ್ನ ಇವಳೇ ವಹಿಸಿಕೊಂಡು ಅವನ ಹಿಂದೆ ನಿಂತು ಅವನ ಎಲ್ಲಾ ಸಾಧನೆಗಳಿಗೆ ಸ್ಪೂರ್ತಿಯಾಗುತ್ತಾಳೆ.

ಸೊಸೆಯಾಗಿ ಅತ್ತೆ ಮಾವಂದಿರ ಮುದ್ದು ಮಗಳಾಗಿ, ನಾದಿನಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನೋವನ್ನು ಮರೆಸುತ್ತಾಳೆ.

ಅತ್ತಿಗೆ ತಾಯಿ ಸಮಾನ ಎನ್ನುವಂತೆ ಮೈದುನರಿಗೆ ತಾಯಿಯಾಗಿ ಅಮ್ಮನ ಮನೆಗೂ ಅತ್ತೆಯ ಮನೆಗೂ ಕಲಶವಾಗುತ್ತಾಳೆ.

ತಾಯಿಯಾಗಿ ತನ್ನ ಎಲ್ಲ ನೋವನ್ನು ನುಂಗಿ ಮಗುವೆಂಬ ಮತ್ತೊಂದು ಜೀವವನ್ನು ಭೂಮಿಗೆ ತರುತ್ತಾಳೆ.
ಕರುಳ ಕುಡಿಗೆ ಸ್ವಲ್ಪವು ಕೊರತೆ ಬರದಂತೆ ನೋಡಿಕೊಳ್ಳುತ್ತಾಳೆ.ರಕ್ಷಣೆಯಾಗಿ ನಿಲ್ಲುತ್ತಾಳೆ.
ಶಿಕ್ಷಕಿಯಾಗಿ, ಒಳ್ಳೆಯ ಗೆಳತಿಯಾಗಿ ಜೀವನದ ತಾಯಿತನವನ್ನು ಆನಂದಿಸುತ್ತಾಳೆ.

ಮಾಗಿ ಮುಪ್ಪಾವರಿಸಿ ಅಜ್ಜಿಯಾದಾಗ ಮನೆಯ ಹಿರಿಜೀವವಾಗಿ ಕುಟುಂಬದ ಎಲ್ಲರ ಬಗ್ಗೆಯೂ ಚಿಂತಿಸುತ್ತಾ, ಕೈಲಾದ ಕೆಲಸ ಮಾಡುತ್ತಾಳೆ. ಮೊಮ್ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರ ಆಟ ಪಾಠಗಳಲ್ಲೂ ಭಾಗಿಯಾಗುತ್ತಾಳೆ. ಮನೆಯ ಎಲ್ಲಾ ಹಾಗು ಹೋಗುಗಳನ್ನು ತನ್ನ ಅನುಭವದ ಅನಿಸಿಕೆಯಿಂದ ಬಗೆ ಹರಿಸುತ್ತಾಳೆ.

ಹೀಗೆ ಜೀವನದ ಪ್ರತಿಯೊಂದು ಮಜಲುಗಳಲ್ಲೂ ಸದಾ ಸೇವೆ ಮಾಡುತ್ತಾ ತನ್ನ ಗುರಿ ಕಡೆಗೂ ನುಗ್ಗುತ್ತಾ ಸಾರ್ಥಕತೆಯ ಕಡೆಗೆ ಪಯಣಿಸುವ ಹೆಣ್ಣಿನ ಜೀವನ ಎಷ್ಟೊಂದು ಸುಂದರ ಅಲ್ಲವೇ ... ಹೆಣ್ಣೆಂದರೆ ಎಷ್ಟು ಚಂದ ಅಲ್ಲವೇ


                                   ಇಂತಿ,
                                           ಕವಿತಾಗೌಡ
 


No comments:

Post a Comment

Note: only a member of this blog may post a comment.