Friday 19 April 2013

ಏಪ್ರಿಲ್ ಸಂಚಿಕೆಯ ಸಂಚಲನ ಮಾಸ ಪತ್ರಿಕೆಯಲ್ಲಿ ನನ್ನ ಲೇಖನ "ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಳ್ಳು ನೀರು ಬಿಡುವುದಾದರು ಎಂತು ...?".





 ಹೆಣ್ಣೆಂದರೆ  ತಾಯಿ, ಹೆಣ್ಣೆಂದರೆ ಸಹೋದರಿ, ಹೆಣ್ಣೆಂದರೆ ಗೆಳತಿ, ಹೆಣ್ಣೆಂದರೆ ಮಡದಿ, ಹೆಣ್ಣೆಂದರೆ ಮಗಳು, ಹೀಗೆ  ತನ್ನ ಜೀವನದ ಎಲ್ಲಾ ಘಟ್ಟದಲ್ಲೂ  ಒಬ್ಬ ಗಂಡಿನ ಜೀವನದಲ್ಲಿ  ಏಳಿಗೆಗಾಗಿ, ಅವನ ಸುಖ ಸಂತೋಷಗಳಿಗಾಗಿ ಸದಾ ಹಸನ್ಮುಖಿಯಾಗಿ ತನ್ನ ಜೀವ-ಜೀವನವನ್ನೇ ಗಂಧದಂತೆ ಸವೆಸುತ್ತಾಳೆ. ಭೂಮಿತಾಯಿ ತನ್ನೊಳಗೆ ಎಲ್ಲವನ್ನು ಉದುಗಿಸಿಟ್ಟುಕೊಂಡು ಸಕಲ ಚರಾಚರಗಳನ್ನು ಸಲಹುವಂತೆ ಹೆಣ್ಣು ತನ್ನ ಮುಷ್ಠಿಯಷ್ಟಿರುವ ಹೃದಯದಲ್ಲಿ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು, ನೋವು-ಅವಮಾನಗಳನ್ನು ಅಡಗಿಸಿಟ್ಟುಕೊಂಡು ಎಲ್ಲರನ್ನು ಪ್ರೀತಿಸುತ್ತಾಳೆ.

ಈ ಸಮಾಜ ಹೆಣ್ಣು ಸಹನಾಮಯಿ, ಕರುಣಾಮಯಿ, ಶಾಂತಮೂರ್ತಿ ಎಂದೆಲ್ಲಾ ಅವಳನ್ನು ಕರೆದು ಹಾಡಿ ಹೊಗಳಿ ಬಣ್ಣಿಸಿ ವರ್ಣಿಸಿ ಇಂದು ಅವಳನ್ನು ಅಸಹಾಯಕಳಾಗಿ ನಿಲ್ಲುವಂತೆ ಮಾಡಿದೆಯೇನೋ ಎನಿಸುತ್ತಿದೆ. ಅವಳ ಸುತ್ತಲೂ ಲಕ್ಷ್ಮಣ ರೇಖೆಯ ತರಹ ಇತಿಮಿತಿಗಳನೇರಿ ಬಂಧಿಸಿತೇನೋ ಎಂದೆನಿಸುತ್ತಿದೆ.

ಪುರಾಣದಲ್ಲಿ ಆದಿಶಕ್ತಿಯು ದೇವತೆಗಳಿಗೆಲ್ಲ ರಕ್ಷಾಕವಚವಾಗಿದ್ದಳು. ರಾಕ್ಷಸರ ಉಪಟಳಗಳು ಅತಿಯಾದಾಗ ಬ್ರಹ್ಮ ವಿಷ್ಣು ಮಹೇಶ್ವರರಾದಿಯಾಗಿ ತಂಡೋಪತಂಡವಾಗಿ ಅವಳಿರುವಲ್ಲಿಗೆ ಹೋಗಿ, ಅವಳನ್ನು ಹಾಡಿ ಹೊಗಳಿ ಅವರ ಕಷ್ಟಗಳನ್ನು ತೋಡಿಕೊಂಡು ತಮ್ಮನ್ನು ಕಷ್ಟದಿಂದ ಪಾರುಮಾಡು ಎಂದು ಬೇಡಿಕೊಳ್ಳುತ್ತಿದ್ದರು . ವಿವಿಧ ಅವತಾರಗಳನೆತ್ತಿ ರಾಕ್ಷಸರ ಸಂಹರಿಸಿ ರಕ್ಷಿಸುತ್ತಿದ್ದ ಹೆಣ್ಣು ಇಂದು ತನ್ನ ರಕ್ಷಣೆಗಾಗಿ ಕೈ ಚಾಚಿ ನಿಲ್ಲಬೇಕಾಗಿದೆ. ಪ್ರತಿದಿನವೂ ತನ್ನ ಮೇಲಾಗುವ ದೌರ್ಜನ್ಯದ ಪೆಟ್ಟನ್ನು ಕಂಡು ಕಾಣದಂತೆ ಸಹಿಸಬೇಕಾಗಿದೆ.

ಹುಟ್ಟಿನಿಂದಲೇ ಶುರುವಾಗುತ್ತೆ ತಾರತಮ್ಯ. ಕಣ್ಣಬಿಡುವ ಮುನ್ನವೇ ಭ್ರೂಣ ಹತ್ಯೆಯ ಹೆಸರಲ್ಲಿ ಸಾಯುವ ಸಂಕಷ್ಟ. ಎಲ್ಲರಿಗೂ ಮುಕ್ತಿ ಮಂತ್ರ ಪಟಿಸುವ ವಂಶೋದ್ದಾರಕ ಬೇಕು. ಹುಟ್ಟೋ ಮಗು ಹೆಣ್ಣೋ ಗಂಡೋ ಯಾವುದಾದರೂ ಪರವಾಗಿಲ್ಲ ಅಂದುಕೊಳ್ಳುವವರ ಮನಸ್ಸಲ್ಲೂ ಹೆಣ್ಣು ಮಗು ಹುಟ್ಟಿದಾಗ ಆಗುವ ಖುಷಿಯೇ ಬೇರೆ. ಗಂಡು ಮಗು ಹುಟ್ಟಿದಾಗ ಆಗುವ ಖುಷಿಯೇ ಬೇರೆ.
ಎತ್ತ ನೋಡಿದರತ್ತ ರಾಕ್ಷಸರ ಹಿಂಡಿದೆ. ಎಲ್ಲಿ ಯಾರು, ಯಾವಾಗ, ಹೇಗೆ ಮುತ್ತಿಗೆ ಹಾಕುತ್ತಾರೋ ಎಂಬ ಭಯದಲ್ಲಿ ಜೀವನ ಸಾಗಿಸಬೇಕಾಗಿದೆ. ಹೆಣ್ಣಾಗಿ ಹುಟ್ಟಿ ಹುಣ್ಣಾಗುವುದಕ್ಕಿಂತ ಗಿಡದ ಮೇಲಿನ ಹಣ್ಣೇ ವಾಸಿ. ಹಣ್ಣಾದರೂ ತಿನ್ನೋದಿಕ್ಕೆ ಮಾಗಬೇಕು. ಆದರೆ ಹೆಣ್ಣು ಹುಟ್ಟಿದರೆ ಸಾಕು ಭೋಗಿಸುವವರಿಗೆಷ್ಟು ಬಾಗಿಲುಗಳು..! ಮುಗ್ದ ನಗುವಿನ ಪ್ರಪಂಚದ ಪರಿವೇ ಇಲ್ಲದ ಮಗುವಿನಲ್ಲೂ ಕಾಮವನ್ನು ಕಾಣುವ ನೀಚರಿದ್ದಾರೆ. ಬೇರೆಯವರೇಕೆ ಜನ್ಮದಾತನೆನಿಸಿಕೊಂಡ ತಂದೆ ಕೂಡ ಮಗಳನ್ನು ಭೋಗಿಸುವ ಕಾಮಾಂಧನಾಗಿದ್ದಾನೆ.

ಮಣ್ಣಿನಂತ ಮಕ್ಕಳಿಗೆ ಒಳ್ಳೆಯ ಬುದ್ದಿ ಕಲಿಸಿ, ತಿದ್ದಿ ತೀಡಿ ಶಿಲೆಗಳನ್ನಾಗಿ ಮಾಡಿ ಶಿಲ್ಪಿ ಎನಿಸಿಕೊಳ್ಳುವ ಗುರುವೇ ಇಂದು ಭಕ್ಷಕನಾಗಿ ತನ್ನ ವಾಂಛೆಯನ್ನು ತೀರಿಸಿಕೊಳ್ಳಲು ಶಾಲೆಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಮಾಗದ ಮನಸ್ಸುಗಳನ್ನು ಘಾಸಿಗೊಳಿಸುತ್ತಿದ್ದಾನೆ.  ಹಡೆದವ್ವ ಪ್ರತಿದಿನವು ತನ್ನ ಮಗಳನ್ನು ರಕ್ಷಿಸುವುದಕ್ಕಾಗಿ ಅವಳ ಸುತ್ತಲೂ ಇರುವವರು ಮಗಳ ಮೇಲೆ ತೋರುವ ಪ್ರೀತಿಯನ್ನು ಅನುಮಾನಿಸುವಂತಾಗಿದೆ.

ಕಾಲೇಜು ಮೆಟ್ಟಿಲೇರಿದ ಮೊಗ್ಗಿನ ಮನಸ್ಸಿನ ಪೋರಿಗೆ, ಚಿಟ್ಟೆ ರೆಕ್ಕೆ ಬಿಚ್ಚುವಂತೆ ತಾನೂ ಮನ ಬಿಚ್ಚಿ ಹಾಡಿ ಕುಣಿದು ನಲಿಯುವ ಆಸೆ. ಹರಯದಲ್ಲಿ ಸಹಜವಾಗೇ ಹೊಸತನದ ಹುಡುಗಾಟಕ್ಕೆ ನಿಲ್ಲುತ್ತೆ. ಹೃದಯಕ್ಕೆ ಹತ್ತಿರವಾಗುವವರ ಸಂಖ್ಯೆ ದೊಡ್ಡದು. ಅದು ಸ್ನೇಹವೋ ಪ್ರೀತಿಯೋ ಎಂದು ಯೋಚನೆ ಮಾಡದ ವಯಸ್ಸು ಅದು.  ಆಗ ಪಾರಿಜಾತದಂತಹ ಪೋರಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಆಸ್ವಾದಿಸಿ  ಅಡಗಿಸಿಬಿಡೋ ಅದೆಷ್ಟು ಘಟನೆಗಳು ನಡೆದಿಲ್ಲಾ..? ಒಪ್ಪದಿದ್ದ ಹುಡುಗಿಯರಿಗೆ ಆಸಿಡ್ ಎಂಬ ಬೆದರಿಕೆ ಹಾಕಿ ಮೊಗ್ಗರಳಿ ಹೂವಾಗುವ ಮುನ್ನವೇ ಬಾಡಿಸಿ ಬಿಡುವ ಅದೆಷ್ಟು ನೀಚರಿದ್ದಾರೆ, ಈ ಭೂಮಿ ಮೇಲೆ. ಹೀಗೆ ಬಣ್ಣ ಬಣ್ಣದ ಕನಸುಗಳನ್ನು ಹೊಸಕಿ ಹಾಕುವ ವಿಕೃತ ಮನಸ್ಸಿನವರಿಗೆ ಕೊನೆಯೆಂದೋ ...!
ಅವಳು ಮದುವೆಯಾಗಿ ಗಂಡನ ಆಸರೆಯಲ್ಲಿರುವಾಗಲಾದರೂ ನೆಮ್ಮದಿಯಿಂದ ಇರುತ್ತಾಳಾ.. ? ಇಲ್ಲ .  ಪ್ರತಿದಿನ ಪ್ರತಿಕ್ಷಣ ಹೋದಕಡೆ ಬಂದ ಕಡೆ ಕಾಮಾಂಧರು ಅವಳ ಮೇಲೆ ಕಣ್ಣು ಹಾಕುತ್ತಲೇ ಇರುತ್ತಾರೆ.

ಆದರೂ ಸಮಾದಾನ ಪಟ್ಟುಕೊಳ್ಳುವಂತ ಬೆಳವಣಿಗೆಗಳು ನಡೆದಿವೆ. ಹೆಣ್ಣು ಇಂದು ಮೊದಲಿನಂತಿಲ್ಲ ಗಂಡಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಚಾಕಾಚಕ್ಯತೆಯನ್ನು ಪ್ರದರ್ಶಿಸಿ ಮುಂದಿದ್ದಾಳೆ. ತೊಡುವ ಬಟ್ಟೆಯನ್ನಷ್ಟೇ ಅಲ್ಲದೆ ತನ್ನ ವ್ಯಕ್ತಿತ್ವವನ್ನು ಸಹ ಬದಲಾಯಿಸಿಕೊಂಡಿದ್ದಾಳೆ. ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವನ್ನು ತಂದುಕೊಂಡಿದ್ದಾಳೆ. ಸಾಕಷ್ಟು ಬಲಿಷ್ಠಳಾಗಿದ್ದಾಳೆ. ಆದರೂ ಅವಳ ಮೇಲೆ ನಡೆಯುತ್ತಿರುವ  ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳಿಗೆ ಯಾವುದೇ ಅಡೆ ತಡೆ ಕಾಣುತ್ತಿಲ್ಲ.

ಹೆಣ್ಣು ಪ್ರಕೃತಿಗೆ ಸಮಾನಳು. ಪ್ರಕೃತಿಗೆ ಗೊತ್ತಿರುವುದು ಒಂದೇ ಎಲ್ಲವನ್ನು ಸಹಿಸಿಕೊಂಡು ಸದಾ ಶಾಂತವಾಗಿರುವುದು. ತಾಳಲಾಗದ ಸ್ಥಿತಿಯಲ್ಲಿ ವಿಕೋಪಗೊಳ್ಳುವುದು. ಹೆಣ್ಣು ಸಹ ಸದಾ ಶಾಂತಿಯಿಂದ ಸಹಿಸಿಕೊಳ್ಳುತ್ತಾಳೆ. ಸಹಿಸಲಾಗದ ಸ್ಥಿತಿಯಲ್ಲಿ ತಿರುಗಿ ಬೀಳುತ್ತಾಳೆ.

ಮೊನ್ನೆ ದೆಹಲಿ ಹೆಣ್ಣುಮಗಳ ಮೇಲೆ ಅತ್ಯಾಚಾರವಾದಾಗ ಇಡೀ ದೇಶವೇ ಮರುಗಿ, ಹೆಣ್ಣು ಕುಲವೇ ಬೀದಿಗಿಳಿದು ಪ್ರತಿಭಟಿಸಿತು. ತಪ್ಪಿತಸ್ತರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸಾರಿ-ಸಾರಿ ಕಾನೂನಿನ ಕದ ತಟ್ಟಿದರು. ಇಂತಹ ಅತ್ಯಾಚಾರಗಳು-ದೌರ್ಜನ್ಯಗಳು  ಹೊಸತಲ್ಲ. ಅನಾದಿ ಕಾಲದಿಂದಲೂ ಮತ್ತೆ ಮತ್ತೆ ತಲೆ ಎತ್ತುತ್ತಿವೆ.  ಮೊದಲೆಲ್ಲ ಹೆಣ್ಣು ಅನಕ್ಷರಸ್ಥಳಾಗಿದ್ದಳು. ಅಮಾಯಕಳಾಗಿ ನಾಲ್ಕು ಗೋಡೆಗಳ ಮಧ್ಯೆ ನಿಂತು, ಪುರುಷ ಪ್ರಧಾನ ಸಮಾಜದಲ್ಲಿ ತನಗಾದ ಅನ್ಯಾಯದ ಬಗ್ಗೆ ದನಿ ಎತ್ತಲೂ ಆಗದೆ ನಿಶ್ಯಕ್ತಳ್ಳಂತಿದ್ದಳು. ಆದ್ದರಿಂದ ಇಂತಹ ನೀಚ ಕೃತ್ಯಗಳು ಬೆಳಕಿಗೆ ಬರುತ್ತಿರಲಿಲ್ಲ.
ಈಗ ಹೆಣ್ಣು ವಿದ್ಯಾವಂತೆ, ಬುದ್ದಿವಂತೆ, ಮೇಲಾಗಿ ಸ್ವತಂತ್ರಳು. ಆದ್ದರಿಂದಲೇ ತನಗಾದ ಅನ್ಯಾಯದ ವಿರುದ್ದ ದನಿ ಎತ್ತುತ್ತಿದಾಳೆ. ಬೇರೆಯವರ ಕಷ್ಟಕ್ಕೆ ದನಿಗೂಡಿಸುತ್ತಿದ್ದಾಳೆ.  ಇಷ್ಟಾದರೂ ಹಳ್ಳಿಗಾಡಿನ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಅನ್ಯಾಯದ ವಿರುದ್ದ ಆಕ್ರೋಶಗೊಳ್ಳದ ಮಹಿಳೆಯರಿದ್ದಾರೆ. ಇದುವರೆಗೂ ಅತ್ಯಾಚಾರದ ಪ್ರಕರಣಗಳು ಪೋಲಿಸ್ ಠಾಣೆ ಮೆಟ್ಟಿಲೇರಿರುವುದು ಶೇಕಡ ೨೫ ರಷ್ಟಿದ್ದರೆ  ಅಪರಾಧಿಗಳ ಬೆದರಿಕೆಗೆ ಹೆದರಿ ಶೇಕಡ ೨೫ ಮಂದಿ ಸುಮ್ಮನಿದ್ದಾರೆ. ಇನ್ನುಳಿದವರು ಸಮಾಜದಲ್ಲಿ ಮಾನ-ಮರ್ಯಾದೆ ಎಂಬ ಚೌಕಟ್ಟಿನಲ್ಲಿ ಅನ್ಯಾಯಗಳನ್ನು ಸಹಿಸಿಕೊಂಡಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ "ಹೆಣ್ಣಿನ ನೋವು-ನಲಿವುಗಳಿಗೆ ಆಕೆಯೇ ಕಾರಣ" ಎಂಬ ಓಶೋ ಅವರು ಹೇಳಿದ ಮಾತು ನೆನಪಾಗುತ್ತದೆ.  ಆದರೂ ಯಾವೊಂದು ಹೆಣ್ಣೂ ಸಹ ಬೇಕೆಂದು ತನ್ನ ಜೀವನವನ್ನು, ಜೀವನದ ಮೌಲ್ಯಗಳನ್ನು ಹೊಸಕಿ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಇಷ್ಟೆಲ್ಲಾ ಆಗುತ್ತಿರುವುದು ಇಂದಿನ ಸಮಾಜದಲ್ಲಿ ಸಂಬಂಧಗಳ ಬೆಲೆ ಮತ್ತು ಸಂಸ್ಕಾರಗಳು ಕಾಣೆಯಾಗುತ್ತಿರುವುದರಿಂದಲೇ.
ನಾವು ಎಷ್ಟೇ ಪ್ರತಿಭಟಿಸಿ ಎಲ್ಲಾ ಅನಿಷ್ಟಗಳಿಗೂ ನೀನೇ ಕಾರಣ ಎಂದು ಕಾನೂನು ವ್ಯವಸ್ಥೆಯನ್ನು ದೂರಿದರೂ, ಆಳುವ ವರ್ಗದ ಮಾನವನ್ನು ಗಾಳಿಯಲ್ಲಿ ತೂರಿದರೂ, ಇಂತಹ ಕೃತ್ಯಗಳಿಗೆ ಎಳ್ಳು ನೀರು ಬಿಡುವುದು ಕಷ್ಟ. ನಮ್ಮ ಸಮಾಜ ಹೆಣ್ಣನ್ನು ನೋಡುವ ರೀತಿ ಬದಲಾಗಬೇಕು. ಅವಳನ್ನು ನಮ್ಮ ಮನೆಯ ತಾಯಿಯಂತೆ, ಸಹೋದರಿಯಂತೆ ಕಾಣಬೇಕು.  ಕಾಮ ಎನ್ನುವ ಕಾಮಾಲೆ(ಜಾಂಡೀಸ್)ಯಿಂದ ಮುಕ್ತವಾಗಬೇಕು. ಸಂಸ್ಕೃತಿ ಸಂಪ್ರದಾಯ, ಹೆಣ್ಣಿನ ಬಗ್ಗೆ ಇರುವ ಯೋಚನಾ ಶೈಲಿ ಬದಲಾಗಬೇಕು. ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಕಾನೂನು ವ್ಯವಸ್ಥೆಯಲ್ಲಿ ಹೆಣ್ಣಿನ ಸುರಕ್ಷತೆಯ ಬಗ್ಗೆ ಮಹತ್ವದ ಕಾನೂನೊಂದನ್ನು ಸ್ವಲ್ಪ ಬಿಗಿಯಾಗಿ ರಚಿಸಿ, ಅನುಷ್ಠಾನಗೊಳಿಸಿದಾಗಲೇ ಬದಲಾವಣೆಯನ್ನು ಕಾಣಬಹುದು.  ಅಸಹಾಯಕ ಹೆಣ್ಣು ಜೀವಗಳು ನೆಮ್ಮದಿಯ ನಿಟ್ಟುಸಿರು ಬಿಡುವುದನ್ನು ಕಾಣಬಹುದು. ಅಂದ ಹಾಗೆ ಇದು ಪುರುಷ ವಿರೋಧಿ ನೀತಿಯೂ ಅಲ್ಲ, ಸ್ತ್ರೀ ವಾದವೂ ಅಲ್ಲ. ಕಣ್ಣಿಗೆ ಕಾಣುವ ಕರಾಳ ಮುಖದ ಅವಲೋಕನ.  
                                  
                                                                        ಇಂತಿ,
                                                                                ಕವಿತಾಗೌಡ

No comments:

Post a Comment

Note: only a member of this blog may post a comment.