Tuesday, 23 April 2013

22/04/2013 ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ಲೇಖನ "ಮುಪ್ಪು ಒಪ್ಪು"ಮುದ್ದಿಸಿದ ಪೋಷಕರು ಮುಪ್ಪಾದರೂ ಬೇಕು ..!

ನಡೆದಾಡುವ ದೇವರುಗಳೆಂದರೆ ಅದು ಅಪ್ಪ ಅಮ್ಮ ಮಾತ್ರ. ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲದೇ ತಂದೆ ತಾಯಿಯನ್ನು ಸೃಷ್ಟಿಸಿದನಂತೆ. ಕೂಸು ಕಣ್ಣು ಬಿಡುವ ಮುನ್ನವೇ ಸಾವಿರಾರು ಕನಸು ಕಟ್ಟಿ ತನ್ನ ಮಕ್ಕಳಿಗೆ ಪ್ರಪಂಚದ ಎಲ್ಲಾ ಸುಖ ಸವಲತ್ತು ಕಲ್ಪಿಸಬೇಕೆಂದು ಜವಾಬ್ದಾರಿಗಳ ಸರಮಾಲೆಗೆ ಹೆಗಲು ಕೊಟ್ಟ ತಂದೆನವ ಮಾಸ ತನ್ನೊಳಗೆ ಅವಿತಿಟ್ಟು ಎಲ್ಲ ನೋವ ಸಹಿಸಿ ತಮ್ಮೆಲ್ಲಾ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ತನ್ನ ಒಡಲಕುಡಿಯನ್ನು ಭೂಮಿಗೆ ತರುವ ತಾಯಿ, ಈ ಎರಡು ಜೀವಗಳನ್ನು ಬಣ್ಣಿಸಲು ಪದಗಳೇ ಸಾಲದು.

ತಮ್ಮೆಲ್ಲಾ  ಆಸೆ ಬದಿಗಿಟ್ಟು ಕಷ್ಟಗಳ ನುಂಗಿ ಮಕ್ಕಳಿಗೆ ಬೇಕ್ಕಾದ್ದನ್ನೆಲ್ಲಾ ಕಲ್ಪಿಸಿ, ತಾವು ಉಪವಾಸವಿದ್ದರೂ ಮಕ್ಕಳಿಗೆ ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಿಸುವ ಮಾತಾಪಿತೃಗಳು, ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಅವರಿಗೆ ಅವರ ಬಾಲ್ಯದಲ್ಲಿ ಸಿಗದ ಎಲ್ಲವನ್ನೂ ಮಕ್ಕಳಿಗೆ ಮಾಡುತ್ತಾರೆ. ನಾವು ಸಾಧಿಸಲಾಗದ್ದನ್ನು ನಮ್ಮ ಮಕ್ಕಳಾದರೂ ಸಾಧಿಸಲಿ ಎಂದು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ.  ತಮ್ಮ ಆರ್ಥಿಕ ಮಿತಿ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ  ತುಡಿತದಲ್ಲಿ ಸಾಲಸೋಲ ಮಾಡಿಯಾದರೂ ಉತ್ತಮ, ಉನ್ನತ ಶಿಕ್ಷಣವನ್ನೇ ಕೊಡಿಸುತ್ತಾರೆ. ಇಷ್ಟೆಲ್ಲಾ ಮಕ್ಕಳಿಗಾಗಿಯೇ ಜೀವ ತೇಯುವ ತಂದೆ ತಾಯಿಯೇ ತಮ್ಮ ಮುಪ್ಪಿನ ಕಾಲದಲ್ಲಿ ಮಾತ್ರ ನಮ್ಮ ಮಕ್ಕಳು ಆಸರೆಯಾಗಬೇಕೆಂಬ  ಸಣ್ಣ ಆಸೆಯೂ ಇಂದಿನ ಮಕ್ಕಳಿಂದ ಈಡೇರುತ್ತಿಲ್ಲವೆಂಬ ಕೊರಗು ಎಲ್ಲ ತಂದೆ ತಾಯಿಗಳಲ್ಲಿದೆ.

ತಂದೆ ತಾಯಿಯರಿಬ್ಬರೇ ಐದಾರು ಮಕ್ಕಳನ್ನು ಸಾಕಿ ಸಲಹಿದರೂ ಕೊನೆಗಾಲದಲ್ಲಿ ಮಾತ್ರ ಅದೇ ಐದಾರು ಮಕ್ಕಳಿಂದ ತಂದೆ ತಾಯಿಗಳನ್ನು ಸಾಕಲು ಹೆಣಗಾಡುತ್ತಾರೆ ಎಂಬುದು ಸುಳ್ಳೇನಲ್ಲ. ಎಲ್ಲ ಮಕ್ಕಳು ಅದೇ ರೀತಿ ಎಂದಲ್ಲವಾದರೂ ಬಹುತೇಕ ಮಕ್ಕಳು ತಾವು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನು ನಿರ್ಲಕ್ಷಿಸುತ್ತಿರುವುದು ಅಷ್ಟೇ ಸತ್ಯ.
ತಮ್ಮ ಜೀವಿತಾವಧಿಯ ಕೊನೆ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಂದ ಬಯಸುವುದು ಕೇವಲ ಪ್ರೀತಿ,ಮಮತೆ ಒಂದೆರಡೊತ್ತಿನ ಊಟ ಮಾತ್ರವೇ. ಅಷ್ಟನ್ನು ಕೊಟ್ಟರೆ ಸಾಕು ನಮ್ಮ ಹಿರಿ ಜೀವಗಳು ನೆಮ್ಮದಿಯಿಂದ ಕಾಲ ಕಳೆಯುತ್ತವೆ.

ಇಷ್ಟು ಮಾಡಿ ಸಾಕು...
ಪೋಷಕರನ್ನು ಖುಷಿಯಿಂದಿರಿಸಲು ತೀರಾ ಶ್ರಮಪಡಬೇಕಿಲ್ಲ. ನಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆ ಕೆಲ ಮಾರ್ಪಾಡು ಮಾಡಿಕೊಂಡರೆ ಸಾಕು.
     
·         ಹಿರಿಯ ಜೀವಗಳಿಗೆ ಮಕ್ಕಳಿಂದ ಬೇಕಿರುವುದು ಆಸ್ತಿ ಅಂತಸ್ತಲ್ಲ ಕೇವಲ ಪ್ರೀತಿ ಮಾತ್ರ, ಹಾಗಾಗಿ ಸಾಧ್ಯವಾದಾಗಲೆಲ್ಲಾ ಪೋಷಕರ ಜತೆ ಪ್ರೀತಿಯಿಂದ ಮಾತನಾಡಿ.

·         ಪೋಷಕರ ಮಾತುಗಳಿಗೆ ಸಾಧ್ಯವಾದಷ್ಟು ಕಿವಿ ಕೊಡಿ. ಅವರ ಸಮಸ್ಯೆ ಬಗೆ ಹರಿಸದಿದ್ದರೂ ಪರವಾಗಿಲ್ಲ ಸುಮ್ಮನೆ ಅವರ ಪಕ್ಕ ಕುಳಿತು ಕೇಳಿಸಿಕೊಳ್ಳಿ.

·         ಸದಾ ಎಲ್ಲ ವಿಷಯಗಳಿಗೂ ಮಕ್ಕಳು ನಮ್ಮದೊಂದು ಮಾತು ಕೇಳಲಿ ಎಂಬಾಸೆ ಎಲ್ಲ ಪೋಷಕರದ್ದು. ಹಾಗಾಗಿ ನೀವು ಏನೇ ಮಾಡುವುದಿದ್ದರೂ ಒಂದು ಮಾತು ಅವರ ಗಮನಕ್ಕೆ ತನ್ನಿ. ಇದರಿಂದ ನಿಮಗೇನೂ ನಷ್ಟವಿಲ್ಲ ಆದರೆ ಪೋಷಕರಿಗೆ ಖುಷಿಯಾಗುತ್ತದೆ.

·         ನಿಮ್ಮ ಪೋಷಕರು ಈಗೀಗ ನಿಮಗೆ ಹೊರೆಯಾಗುತ್ತಾರೆ ಎಂದೆನಿಸಿ, ವೃದ್ದಾಶ್ರಮ ಅಥವಾ ಬೇರೆ ಮನೆಗೆ ಕಳುಹಿಸುವ ಮುನ್ನ ಆಲೋಚಿಸಿ, ಮುಂದ್ದೊಂದು ದಿನ ನಿಮಗೂ ವಯಸ್ಸಾಗುತ್ತದೆ ಆಗ ನಿಮ್ಮ ಮಕ್ಕಳು ಹಾಗೆಯೇ ಯೋಚಿಸುತ್ತಾರೆ.

·         ಕಾಲ ಬದಲಾದರೂ ಅದಕ್ಕೆ ತಕ್ಕಂತೆ ಪೋಷಕರು ಬಹು ಬೇಗ ಬದಲಾಗರು. ಹಾಗಾಗಿ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಹಳೆಪದ್ದತಿ ಹಳೆಜನ ಎಂದು ಹೀಗೆಳೆಯಬೇಡಿ.

·         ನಿಮಗಾಗಿ ಜೀವವನ್ನೇ ಸವೆಸಿದವರು ಅವರು, ಹಾಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ ನೀವು ಚಿಕ್ಕವರಾಗಿದ್ದಾಗ ಕೇಳುವ ಮೊದಲೇ ನಿಮ್ಮಾಸೆಗಳನ್ನು ಈಡೇರಿಸಿದವರು ಅವರು ಎಂಬುದು ನೆನಪಿರಲಿ.

·         ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನೀವು ಮಾಡಿದ್ದನ್ನೇ ನಿಮ್ಮ ಮಕ್ಕಳು ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕ್ಕೊಂಡು ನಿಮ್ಮ ಪೋಷಕರೊಂದಿಗೆ ಪ್ರೀತಿ,ಸಹನೆ ಮಮತೆಯಿಂದ ವರ್ತಿಸಿ.
 
                                                ಇಂತಿ,
                                                        ಕವಿತಾಗೌಡNo comments:

Post a Comment